ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೊನೆಗೂ 35 ದಿನಗಳ ಬಳಿಕ ಎಸ್ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ನಿನ್ನೆ ಮಧ್ಯರಾತ್ರಿ 1 ಗಂಟೆ ವೇಳೆಗೆ ಪ್ರಜ್ವಲ್ ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಎಸ್ ಐಟಿ ಮಹಿಳಾ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ.

ಮೊದಲು ಸಿಐಎಫ್ ಎಸ್ ಪಡೆ ಪ್ರಜ್ವಲ್ ಅವರನ್ನು ತಮ್ಮ ವಶಕ್ಕೆ ತೆಗೆದು ಕೊಂಡು ಬಳಿಕ ಅವರನ್ನು ಇಮಿಗ್ರೇಷನ್ ಅಧಿಕಾರಿಗಳ ಬಳಿ ಕರೆದು ಕೊಂಡು ಹೋದರು,. ಈ ವೇಳೆ ಕಾನೂನು ಪ್ರಕ್ರಿಯೆ ಮುಗಿದ ಕೂಡಲೇ ಎಸ್ ಐ ಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಳಿಕ ಪ್ರಜ್ವಲ್ ರನ್ನು ಎಸ್ ಐ ಟಿ ವಶಕ್ಕೆ ಪಡೆದುಕೊಂಡು ಸಿಐಡಿ ಕಚೇರಿಯತ್ತ ಕರೆದುಕೊಂಡು ಹೋಗಲಾಯಿತು. ಅವರನ್ನು ಶನಿವಾರ ಸಂಜೆ ನ್ಯಾಯಾಧೀಶರ (ಇಂದು) ಮುಂದೆ ಹಾಜರು ಪಡಿಸಿ ಅವರನ್ನು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೇ ಎನ್ನಲಾಗಿದೆ. ಶನಿವಾರ ಬೆಳಗ್ಗೆ ಅವರನ್ನು ಬೌರಿಂಗ್ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಲಿದ್ದಾರೆ ಎನ್ನಲಾಗಿದೆ.

ಈ ನಡುವೆ ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯ ಅಪಹರಣ ಸೇರಿ ಎಫ್‌ಐಆರ್ ದಾಖಲಾಗಿರುವ ಮೂರು ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಎಂಬುದಾಗಿ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇಂದು ಅಂದರೆ ಶನಿವಾರ ಅದರ ಅರ್ಜಿ ವಿಚಾರಣೆ ನಡೆಯಲಿದೆ.ಇನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗೆ ಮುಜುಗರ ಉಂಟುಮಾಡುವ ನಿಟ್ಟಿನಲ್ಲಿ ಮಹಿಳಾ ಅಧಿಕಾರಿಗಳಿಂದಲೇ ಬಂಧನವಾಗಿದೆ ಎನ್ನಲಾಗಿದೆ..

ಅಲ್ಲದೇ ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಬೇಕು. ನಾವಿದ್ದೇವೆ ಧೈರ್ಯವಾಗಿ ಬಂದು ದೂರು ನೀಡುವಂತೆ ಸಂದೇಶ ರವಾನಿಸಬೇಕು. ಹೀಗಾಗಿ ಮಹಿಳಾ ಅಧಿಕಾರಿಗಳಿಂದ ಎಸ್‌ಐಟಿ ಅರೆಸ್ಟ್ ಮಾಡಿಸಿದೆ ಎನ್ನಲಾಗುತ್ತಿದೆ.