ಬೆಂಗಳೂರು; ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಎಸ್ ಐಟಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್ ಡಿ ರೇವಣ್ಣ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಹೀಗಿರುವಾಗ ಪ್ರಜ್ವಲ್ ರೇವಣ್ಣ ಪರ ವಕೀಲ ವಿಚಾರಣೆಗೆ ಕಾಲವಕಾಶ ಕೋರಿ ಮನವಿ ಸಲ್ಲಿಸಿದ್ರೆ ಇತ್ತ ಬಂಧನ ಭೀತಿಯಲ್ಲಿರುವ ಶಾಸಕ ಹೆಚ್ ಡಿ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಎಚ್ ಡಿ.ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಎಸ್ಐಟಿ ಈಗಾಗಲೇ ಈ ಪ್ರಕರಣ ತನಿಖೆಯನ್ನು ಚುರುಕುಗೊಳಿಸಿದ್ದು, ಮಹತ್ವದ ಮಾಹಿತಿ ಕಲೆಹಾಕುತ್ತಿದೆ. ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಮತ್ತು ಪ್ರಜ್ವಲ್ಗೆ ನೋಟಿಸ್ ಜಾರಿ ಮಾಡಿದೆ. ಇದರ ಬೆನ್ನಲ್ಲೇ ರೇವಣ್ಣ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನು ಒಂದು ವೇಳೆ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ರದ್ದಾದರೆ ರೇವಣ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇನ್ನು ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಇನ್ನೂ ವಿದೇಶದಲ್ಲಿರುವುದರಿಂದ ವಿಚಾರಣೆಗೆ ಏಳು ದಿನ ಕಾಲಾವಕಾಶ ಕೋರಿದ್ದಾರೆ. ಆದ್ರೆ, ಇದಕ್ಕೆ ಎಸ್ಐಟಿ ನಿರಾಕರಿಸಿದ್ದು, ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ಹೀಗಾಗಿ ಪ್ರಜ್ವಲ್ಗೆ ಸಂಕಷ್ಟ ಎದುರಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಪರ ವಕೀಲ ಸಹ ಇತ್ತ ಜಾಮೀನಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ರೇವಣ್ಣ ಅವರ ಜಾಮೀನು ಅರ್ಜಿ ಏನಾಗಲಿದೆ ಎಂದು ನೋಡಿಕೊಂಡು ಪ್ರಜ್ವಲ್ ಪರ ವಕೀಲರು ಸಹ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.