ಬೆಂಗಳೂರು: ಮಹಿಳೆ ಕಿಡ್ನ್ಯಾಪ್ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಶಾಸಕ ಹೆಚ್.ಡಿ ರೇವಣ್ಣಗೆ ಕೊನೆಗೂ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದಲ್ಲಿ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಇಂದು ರೇವಣ್ಣ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರ ಮುಂದೆ, ರೇವಣ್ಣ ಪರ ಹಾಗೂ ಸರ್ಕಾರಿ ವಕೀಲರ ನಡುವೆ ವಾದ – ಪ್ರತಿವಾದ ಮಂಡಿಸಿದರು.
ಈ ವೇಳೆ ಇಂತಹ ಕಾರಣಗಳಿಗೆ ಜಾಮೀನು ಕೊಡಲೇ ಬೇಕು ಎಂದು ರೇವಣ್ಣ ಪರ ವಕೀಲರಾದ ನಾಗೇಶ್ ವಾದ ಮಂಡಿಸಿದರು.ಜಾಮೀನನ್ನು ಏಕೆ ಕೊಡಬಾರದು? ಕೊಟ್ಟರೆ ಮುಂದೇನಾಗುತ್ತದೆ ಎಂದು ಎಸ್‌ಐಟಿ ಪರ ವಕೀಲರಾದ ಜಯ್ನಾ ಕೊಠಾರಿ ಹಾಗೂ ಅಶೋಕ್ ನಾಯ್ಕ್ ವಾದಿಸಿದ್ದರು. ಅಂತಿಮವಾಗಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ವಾದ – ಪ್ರತಿವಾದ ಆಲಿಸಿ ಹೆಚ್.ಡಿ ರೇವಣ್ಣ ಅವರಿಗೆ ಜಾಮೀನು ನೀಡಿ ಆದೇಶಿಸಿದೆ. ಈ ಮೂಲಕ ಅವರ ಆರು ದಿನಗಳ ಜೈಲುವಾಸ ಅಂತ್ಯವಾದಂತೆ ಆಗಿದೆ.
ಷರತ್ತು ಬದ್ಧ ಜಾಮೀನನಲ್ಲಿ ಏನೇನು ಷರತ್ತುಗಳಿವೆ?
ಇಬ್ಬರ ಶ್ಯೂರಿಟಿಯೊಂದಿಗೆ 5 ಲಕ್ಷ ಬಾಂಡ್ ನೀಡಬೇಕು
ಸಾಕ್ಷ್ಯ ನಾಶ ಮಾಡಬಾರದು
ಎಸ್‌ಐಟಿ ತನಿಖೆಗೆ ಸಹಕರಿಸಬೇಕು.
ಕೆ ಆರ್ ನಗರ ತಾಲೂಕು ಪ್ರವೇಶಿಸುವಂತಿಲ್ಲ
ಈ ಎಲ್ಲಾ ಷರತ್ತುಗಳನ್ನು ವಿಧಿಸಿ ಜಾಮೀನು ನೀಡಿದೆ.