Tuesday, February 10, 2026
Homeರಾಜಕೀಯಶಾಮನೂರು ಶಿವಶಂಕರಪ್ಪನವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

ಶಾಮನೂರು ಶಿವಶಂಕರಪ್ಪನವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ : ಜಾತ್ಯಾತೀತ ಮನೋಭಾವದ ಹಾಗೂ ಜನಪ್ರಿಯ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ನಾಡಿಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೋಕ ವ್ಯಕ್ತಪಡಿಸಿದರು. 

ಇಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಸಚಿವ ದಿ. ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿದರು.

ಇಳಿವಯಸ್ಸಿನಲ್ಲೂ ಕ್ರೀಯಾಶೀಲರಾಗಿದ್ದ ಅಜಾತಶತ್ರು 

ಶಾಮನೂರು ಶಿವಶಂಕರಪ್ಪ ಅವರು ದೇಶ ಕಂಡ ಅಪರೂಪದ ಹಿರಿಯ ಶಾಸಕ ಮತ್ತು ಮುತ್ಸದ್ದಿ ರಾಜಕಾರಣಿ. ದಾವಣಗೆರೆ ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಂಸದರಾಗಿ ಹಾಗೂ ಕಾಂಗ್ರೆಸ್ ಪಕ್ಷದ ಸುದೀರ್ಘ ಕಾಲದ ಖಜಾಂಚಿಯಾಗಿ ಅವರು ಸಲ್ಲಿಸಿದ ಸೇವೆ ಸ್ಮರಣೀಯ. “ಇತ್ತೀಚೆಗಷ್ಟೇ ಅವರ ಜನ್ಮದಿನಾಚರಣೆ ಮತ್ತು ದಾಲ್ ಮಿಲ್ ಉದ್ಘಾಟನೆಯಲ್ಲಿ ನಾನು ಭಾಗವಹಿಸಿದ್ದೆ. ಅವರು ಶತಾಯುಷಿಗಳಾಗುತ್ತಾರೆ ಎಂಬ ನಂಬಿಕೆ ನನಗಿತ್ತು. ಇಳಿವಯಸ್ಸಿನಲ್ಲೂ ಅವರು ತೋರುತ್ತಿದ್ದ ಹುರುಪು ಮತ್ತು ಚಟುವಟಿಕೆ ಎಲ್ಲರಿಗೂ ಮಾದರಿ” ಎಂದು ಸಿಎಂ ಸಿದ್ದರಾಮಯ್ಯ ಸ್ಮರಿಸಿದರು.

ಶಿಕ್ಷಣ ಕಾಶಿಯ ನಿರ್ಮಾತೃ 

ದಾವಣಗೆರೆಯನ್ನು ಜವಳಿ ಕೇಂದ್ರದಿಂದ ಶೈಕ್ಷಣಿಕ ಕೇಂದ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಶಾಮನೂರು ಅವರಿಗೆ ಸಲ್ಲುತ್ತದೆ. ಬಾಪೂಜಿ ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ಬಡ ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾದ ಅವರು, ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು. ಉದ್ಯಮಿಯಾಗಿ ಮತ್ತು ಕೈಗಾರಿಕೋದ್ಯಮಿಯಾಗಿ ಅವರು ಈ ಭಾಗದ ಆರ್ಥಿಕ ಪ್ರಗತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ನೆನಪಿಸಿಕೊಂಡರು.

ಬಡವರ ಪಾಲಿನ ಕೊಡುಗೈದಾನಿ 

“ಜಾತಿ-ಧರ್ಮದ ಹಂಗಿಲ್ಲದೆ ಎಲ್ಲ ರಾಜಕೀಯ ಪಕ್ಷದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಅವರು ನಿಜವಾದ ಅಜಾತಶತ್ರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳು ಪ್ರಬಲವಿಲ್ಲದಿದ್ದರೂ, ತಮ್ಮ ಜನಪರ ಕೆಲಸಗಳಿಂದ ಆರು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾಗಿದ್ದರು” ಎಂದು ಸಿದ್ದರಾಮಯ್ಯ ಅವರು ಶ್ಲಾಘಿಸಿದರು. 

ಸಂಕಷ್ಟದಲ್ಲಿರುವವರಿಗೆ ಸದಾ ನೆರವಾಗುತ್ತಿದ್ದ ಅವರ ಬದುಕು ಅತ್ಯಂತ ಸಾರ್ಥಕವಾದುದು. ಮಹಾನ್ ಚೇತನ ಶಾಮನೂರು ಶಿವಶಂಕರಪ್ಪನವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಾರ್ಥಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!