ಬೆಂಗಳೂರು: ಕೋಗಿಲುವಿನಲ್ಲಿ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯಿಂದ ವಾಸಸ್ಥಳ ಕಳೆದುಕೊಂಡವರಿಗೆ ತರಾತುರಿಯಲ್ಲಿ ಮನೆ ಹಂಚಿಕೆ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ಜನವರಿ 5 ರಂದು ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಚಿಸಿರುವ ಸತ್ಯಾಸತ್ಯತೆ ಸಮಿತಿಯ ಮೊದಲ ಸಭೆಯ ನಂತರ ಮಾತನಾಡಿದ ಅವರು, ಈ ಪ್ರಕರಣದ ಹಿಂದೆ ಅನೇಕ ಅಕ್ರಮಗಳಿರುವ ಶಂಕೆ ವ್ಯಕ್ತಪಡಿಸಿದರು. ಕೋಗಿಲುವಿನಲ್ಲಿ ವಾಸವಿದ್ದವರು ಯಾವ ರಾಜ್ಯದವರು ಅಥವಾ ಯಾವ ದೇಶದವರು ಎಂಬ ಮಾಹಿತಿಯನ್ನು ಕಲೆಹಾಕಲಾಗುವುದು ಮತ್ತು ಶೀಘ್ರದಲ್ಲೇ ಸ್ಥಳ ಪರಿಶೀಲನೆ ನಡೆಸಿ ಒಂದು ವಾರದಲ್ಲಿ ರಾಜ್ಯಾಧ್ಯಕ್ಷರಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ಸರ್ಕಾರದ ವಿರುದ್ಧ ಆಕ್ಷೇಪ: ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ಪಡೆಯಲು ಕನಿಷ್ಠ 5 ವರ್ಷ ವಾಸವಿರುವ ದೃಢೀಕರಣ ಪತ್ರ ಕಡ್ಡಾಯ. ಆದರೆ, ಕೋಗಿಲುವಿನವರಿಗೆ ಅಷ್ಟು ಸುಲಭವಾಗಿ ದೃಢೀಕರಣ ಪತ್ರ ನೀಡಿದರೆ ಅದು ಕಾನೂನು ಬಾಹಿರವಾಗುತ್ತದೆ. ಆರು ವರ್ಷಗಳ ಹಿಂದೆ ಹಣ ಕಟ್ಟಿದವರಿಗೆ ಇನ್ನೂ ಮನೆ ಸಿಕ್ಕಿಲ್ಲ, ಅಂತಹದರಲ್ಲಿ ವಾರದಲ್ಲಿ ಹೊಸದಾಗಿ ಮನೆ ಹಂಚಿಕೆ ಮಾಡುವುದು ಅಕ್ರಮ ಎಂದು ವಿಶ್ವನಾಥ್ ಕಿಡಿಕಾರಿದರು.
ಕಾನೂನು ಹೋರಾಟದ ಮುನ್ನೆಚ್ಚರಿಕೆ: ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರ ಮೇಲೆ ಮತ್ತು ಅವರಿಗೆ ವಿದ್ಯುತ್ ಸಂಪರ್ಕ ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕಿತ್ತು. ಅದನ್ನು ಬಿಟ್ಟು ಅವರಿಗೆ ಮನೆ ನೀಡುವುದು ಸರಿಯಲ್ಲ. ಒಂದು ವೇಳೆ ಸರ್ಕಾರ ತರಾತುರಿಯಲ್ಲಿ ಮನೆ ಹಂಚಿಕೆಗೆ ಮುಂದಾದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದರ ಜೊತೆಗೆ ರಾಜ್ಯಪಾಲರಿಗೂ ಮನವಿ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
