ನವದೆಹಲಿ/ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡಿದೆ. ರಾಜ್ಯ ಸರ್ಕಾರ 18,174 ಕೋಟಿ ರೂಪಾಯಿ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದ್ರೆ ಇದೀಗ ಕೇಂದ್ರ 3455 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ.
ಇನ್ನು ತಮಿಳುನಾಡಿಗೆ ಚಂಡಮಾರುತ ಹಾಗೂ ಪ್ರವಾಹ ಪರಿಹಾರವೆಂದು 275 ಕೋಟಿ ರೂ. ರಿಲೀಸ್ ಮಾಡಿದೆ. ಕಳೆದ ಆರು ತಿಂಗಳುಗಳಿಂದ ರಾಜ್ಯಕ್ಕೆ ಬರ ಪರಿಹಾರ ನೀಡುವಂತೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡುತ್ತಲೇ ಬಂದಿತ್ತು. ಕೇಂದ್ರ ಸರ್ಕಾರ ಇದಕ್ಕೆ ಸೊಪ್ಪು ಹಾಕದಿದ್ದಾಗ ಸಿದ್ದರಾಮಯ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಲೋಕ ಸಮರದಲ್ಲೂ ಬರ ಪರಿಹಾರದ ವಿಚಾರವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ. ವಾರದೊಳಗೆ ಪರಿಹಾರ ನೀಡ್ಬೇಕು ಅಂತ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಬರ ಪರಿಹಾರ ರಿಲೀಸ್ ಮಾಡಿದೆ.