Wednesday, March 25, 2026
Homeರಾಜಕೀಯ9ರಂದು ಸಾವಿರಾರು ರೈತರಿಂದ ಸುವರ್ಣಸೌಧಕ್ಕೆ ಮುತ್ತಿಗೆ- ಬಿ.ವೈ.ವಿಜಯೇಂದ್ರ

9ರಂದು ಸಾವಿರಾರು ರೈತರಿಂದ ಸುವರ್ಣಸೌಧಕ್ಕೆ ಮುತ್ತಿಗೆ- ಬಿ.ವೈ.ವಿಜಯೇಂದ್ರ

ಬೆಂಗಳೂರು: ಇದೇ 9ರಂದು ಸುಮಾರು 15ರಿಂದ 20 ಸಾವಿರ ರೈತರ ಜೊತೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಬಿಜೆಪಿ ತೀರ್ಮಾನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ. ರಾಜ್ಯದ ರೈತವಿರೋಧಿ ಕಾಂಗ್ರೆಸ್ ಸರಕಾರವನ್ನು ಬಡಿದೆಬ್ಬಿಸಲು ಮುಂದಾಗುತ್ತೇವೆ. ನಂತರ ಸದನದಲ್ಲೂ ಚರ್ಚಿಸುತ್ತೇವೆ ಎಂದು ತಿಳಿಸಿದರು. ತುಂಗಭದ್ರಾ ಜಲಾಶಯ ಗೇಟ್ ಅಳವಡಿಕೆ ಕಾರ್ಯ ವಿಳಂಬವಾಗಿದ್ದು, ಇದರಿಂದ ರೈತರು ಎರಡನೇ ಬೆಳೆ ಬೆಳೆಯಲು ಸಾಧ್ಯವಿಲ್ಲ; ಆದ್ದರಿಂದ ಅಲ್ಲಿನ ರೈತರಿಗೆ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಲು ಅವರು ಆಗ್ರಹಿಸಿದರು. ಇವೆಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದರು.

ಅಲ್ಲದೆ, ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಬೇಕು. ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಗಮನ ಸೆಳೆಯಬೇಕು; ವಿಶೇಷವಾಗಿ ಉತ್ತರ ಕರ್ನಾಟಕದ ಸಮಸ್ಯೆ, ರೈತರ ಸಂಕಷ್ಟದ ಕುರಿತು, ನೀರಾವರಿ ಸಮಸ್ಯೆ ಬಗ್ಗೆ ಚರ್ಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿಯ ಚಳಿಗಾಲದ ಅಧಿವೇಶನದ ಕುರಿತು ನಾನು, ವಿಪಕ್ಷ ನಾಯಕರು, ಬಿಜೆಪಿ- ಜೆಡಿಎಸ್ ಮುಖಂಡರು ಒಟ್ಟಿಗೆ ಕೂತು ಸವಿಸ್ತಾರವಾಗಿ ಚರ್ಚಿಸಿದ್ದೇವೆ ಎಂದರು. ಪ್ರತಿ ಬಾರಿ ಬೆಳಗಾವಿ ಅಧಿವೇಶನದಲ್ಲಿ ನಾಮಕಾವಾಸ್ತೆ ಒಂದು ದಿನ ಚರ್ಚೆ ನಡೆಯುತ್ತಿದೆ. ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಿಸಿದ್ದು, ಅಲ್ಲಿನ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕೆಂಬ ಆಶಯ ಅವರದಾಗಿತ್ತು ಎಂದು ವಿವರಿಸಿದರು. ಆದು ಆಗುತ್ತಿಲ್ಲ ಎಂದು ಟೀಕಿಸಿದರು.


ಅಧಿವೇಶನದ ಆರಂಭದ ದಿನಗಳಲ್ಲೇ ಈ ಸಮಸ್ಯೆಗಳನ್ನು ಚರ್ಚಿಸಲು ತೀರ್ಮಾನಿಸಿದ್ದೇವೆ. ಕಬ್ಬಿನ ಬೆಳೆಗಾರರ ಸಮಸ್ಯೆ ಪರಿಹಾರವಾಗಿಲ್ಲ. ಮೆಕ್ಕೆ ಜೋಳ ಬೆಳೆಯುವ ರೈತರು 54 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರ ಖರೀದಿ ಕೇಂದ್ರವನ್ನೂ ಪ್ರಾರಂಭಿಸಿಲ್ಲ ಎಂದು ಆಕ್ಷೇಪಿಸಿದರು.

ಸಿದ್ದರಾಮಯ್ಯನವರು ಖರೀದಿ ಕೇಂದ್ರದ ಮೂಲಕ 5 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಆದೇಶ ಮಾಡಿದ್ದಾರೆ. ಮತ್ತೊಂದು ಕಡೆ ತೊಗರಿ, ಉದ್ದು, ಭತ್ತ ಖರೀದಿ ಕೇಂದ್ರ ಆರಂಭಿಸಿಲ್ಲ. ತುಂಗಭದ್ರಾ ಜಲಾಶಯ ಗೇಟ್ ಅಳವಡಿಕೆ ಕಾರ್ಯವನ್ನು ತಡವಾದರೂ ಎಚ್ಚತ್ತುಕೊಂಡು 32 ಗೇಟ್ ಅಳವಡಿಸುವ ನಿಟ್ಟಿನಲ್ಲಿ ಕಾರ್ಯ ಆರಂಭಿಸಿದಂತಿದೆ ಎಂದು ತಿಳಿಸಿದರು.

ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟುಕೊಳ್ಳುವಿರಾ..?
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಷ್ಟಾಚಾರದ ವಿಚಾರದಲ್ಲಿ ತಮ್ಮ ಸರಕಾರಕ್ಕೆ ಕ್ಲೀನ್ ಚಿಟ್ ನೀಡುವ ಕಾರ್ಯ ಮಾಡಿದ್ದಾರೆ. ಹಿಂದೆ ಬಿಜೆಪಿ ಸರಕಾರ ಇದ್ದಾಗ ಶೇ 40 ಭ್ರಷ್ಟಾಚಾರದ ಆರೋಪ ಮಾಡಿದ್ದರು. ಕಾಂಗ್ರೆಸ್ ಸರಕಾರವೇ ರಚಿಸಿದ ತನಿಖಾ ಆಯೋಗ ಬಳಿಕ ಕ್ಲೀನ್ ಚಿಟ್ ಕೊಟ್ಟಿದೆ. ಅದರ ಮಾಹಿತಿ ಸಿದ್ದರಾಮಯ್ಯನವರಿಗೆ ಇಲ್ಲವೇ? ನೀವು ಭ್ರಷ್ಟಾಚಾರದ ವಿಚಾರದಲ್ಲಿ ಸರಕಾರಕ್ಕೆ ಕ್ಲೀನ್ ಚಿಟ್ ಕೊಟ್ಟುಕೊಳ್ಳುವಿರಾ ಎಂದು ಪ್ರಶ್ನಿಸಿದರು.


ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರು ಇಡೀ ದೇಶದಲ್ಲಿ ಕರ್ನಾಟಕವು ಭ್ರಷ್ಟಾಚಾರದಲ್ಲಿ ನಂಬರ್ 1 ಸ್ಥಾನದಲ್ಲಿದೆ ಎಂದಿದ್ದರು. ಇದು ಅಭಿವೃದ್ಧಿ ವಿಚಾರದಲ್ಲಿ ಅಲ್ಲ ಎಂದು ಗಮನ ಸೆಳೆದರು. ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರು ಭ್ರಷ್ಟಾಚಾರದ ವಿಚಾರದಲ್ಲಿ ಹೇಳಿದ್ದು ಬಹಿರಂಗವಾಗಿದೆ. ವಾಲ್ಮೀಕಿ ನಿಗಮದ ಹಗರಣವನ್ನು ಸ್ವತಃ ಮುಖ್ಯಮಂತ್ರಿಗಳು ಸದನದಲ್ಲೇ ಒಪ್ಪಿಕೊಂಡಿದ್ದರು ಎಂದು ವಿವರಿಸಿದರು. ಹಗರಣದ ಮೊತ್ತ ಕಡಿಮೆ ಎಂದಿದ್ದರು ಎಂದರು. ಇದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರಿಗೆ ಮರೆತು ಹೋಗಿದೆಯೇ ಎಂದು ಕೇಳಿದರು.

ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆ ಕಾಂಗ್ರೆಸ್ ಸರಕಾರಕ್ಕೆ ಇಲ್ಲ
ಭ್ರಷ್ಟಾಚಾರರಹಿತ ಆಡಳಿತ ಎಂದು ಯಾವ ಬಾಯಲ್ಲಿ ಹೇಳುತ್ತೀರಿ? ಎಂದು ಬಿ.ವೈ.ವಿಜಯೇಂದ್ರ ಅವರು ಕೇಳಿದರು. ಮುಡಾ ಹಗರಣವನ್ನು ರಾಜ್ಯದ ಜನರು ಮರೆತಿಲ್ಲ ಎಂದ ಅವರು, ನೀವ್ಯಾಕೆ ನಿವೇಶನಗಳನ್ನು ಹಿಂತಿರುಗಿಸಿದ್ದೀರಿ ಎಂದು ಪ್ರಶ್ನಿಸಿದರು. ಇದು ಭ್ರಷ್ಟಾಚಾರವಲ್ಲವೇ? ಭ್ರಷ್ಟಾಚಾರ ಕುರಿತು ಮಾತನಾಡುವ ಯೋಗ್ಯತೆ, ನೈತಿಕತೆ ಕಾಂಗ್ರೆಸ್ ಸರಕಾರಕ್ಕೆ ಇಲ್ಲ ಎಂದು ನುಡಿದರು. ನಿಮ್ಮ ಬಣ್ಣ ಬಯಲಾಗಿದೆ. ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಸಂಕಷ್ಟದಲ್ಲಿರುವ ರೈತರ ಮನವಿಗೆ ಸ್ಪಂದಿಸುವ ಕೆಲಸ ನೀವು ಮಾಡಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ- ಜೆಡಿಎಸ್ ಜೊತೆ ಸೇರಿ ಈ ಸರಕಾರದ ಕಿವಿ ಹಿಂಡುತ್ತೇವೆ ಎಂದು ತಿಳಿಸಿದರು.

ದೇಶದಲ್ಲಿ ನ್ಯಾಯಾಲಯದ ವ್ಯವಸ್ಥೆ ಇದೆ. ಸುಪ್ರೀಂ ಕೋರ್ಟ್ ಇದೆ. ಕೇಂದ್ರದಲ್ಲಿ ಯಾವುದೇ ಸರಕಾರ ಇದ್ದರೂ ಯಾವುದೇ ಪುರಾವೆ ಇಲ್ಲದೇ ಈ ರೀತಿ ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಗಾಂಧಿ ಕುಟುಂಬವು ಒಂದು ಸಾರ್ವಜನಿಕ ಟ್ರಸ್ಟನ್ನು ಖಾಸಗಿ ಟ್ರಸ್ಟಾಗಿ ಪರಿವರ್ತಿಸಿದೆ. ಟ್ರಸ್ಟಿಗಳನ್ನು ತೆಗೆದುಹಾಕಿ ಇವರಿಗೆ ಬೇಕಾದವರನ್ನು ಟ್ರಸ್ಟಿಗಳನ್ನಾಗಿ ಸೇರಿಸಿದೆ; ಡಿ.ಕೆ.ಶಿವಕುಮಾರರಿಗೆ ಈ ವಿಷಯದಲ್ಲಿ ನೋಟಿಸ್ ಕೊಟ್ಟು ತನಿಖೆಗೆ ಬನ್ನಿ ಎಂದರೆ, ತೇಜೋವಧೆ ಅಥವಾ ರಾಜಕೀಯ ದ್ವೇಷ ಅನಿಸಿದರೆ ಅದು ಮೂರ್ಖತನದ ಪರಮಾವಧಿ. ಏನಿದೆಯೋ ಅದನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.


RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!