Monday, February 9, 2026
Homebig breakingಶಾಲಾ ಪಠ್ಯದಲ್ಲಿ ಭಗವದ್ಗೀತೆ ಮತ್ತು ರಾಮಾಯಣ ಸೇರ್ಪಡೆಗೆ HDK ವಿನಂತಿ!

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಮತ್ತು ರಾಮಾಯಣ ಸೇರ್ಪಡೆಗೆ HDK ವಿನಂತಿ!

ನವದೆಹಲಿ;ಪವಿತ್ರ ಗ್ರಂಥ ಭಗವದ್ಗೀತೆಯನ್ನು ರಷ್ಯಾದ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಿರುವುದನ್ನು ಶ್ಲಾಘಿಸಿರುವ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್. ಡಿ ಕುಮಾರಸ್ವಾಮಿ ಅವರು, ಭಾರತದ ಶ್ರೇಷ್ಠ ಪರಂಪರೆ ಮತ್ತು ನಮ್ಮ ಪುರಾಣದ ಹೆಗ್ಗುರುತುಗಳನ್ನು ಮತ್ತಷ್ಟು ಎತ್ತರಕ್ಕೇರಿಸಿ ಸಾರ್ವಕಾಲಿಕಗೊಳಿಸುವ ನಿಟ್ಟಿನಲ್ಲಿ ಪ್ರಧಾನಿಗಳ ದೃಷ್ಟಿಕೋನವು ನಮಗೆಲ್ಲರಿಗೂ ಅನುಕರಣೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮನುಕುಲದ ದಾರಿದೀಪ, ಅರಿವಿನ ಬೆಳಕಾಗಿರುವ ಭಗವದ್ಗೀತೆಯನ್ನು ಶಾಲಾ-ಕಾಲೇಜು, ವಿಶ್ವವಿದ್ಯಾಲಯ ಮಾತ್ರವಲ್ಲ, ಶಿಕ್ಷಣದ ಪ್ರತೀ ಹಂತದಲ್ಲಿಯೂ ಪಠ್ಯವಾಗಬೇಕು ಎಂಬುದು ನನ್ನ ಆಶಯವೆಂದು ತಿಳಿಸಿದ್ದಾರೆ. ಅಲ್ಲದೆ, ಈ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ಕೇಂದ್ರದ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ. ಹಾಗೆಯೇ, ನಮ್ಮ ನೆಲದ ಅನರ್ಘ್ಯ ಸಂಪತ್ತುಗಳಾದ ಶ್ರೀ ವಾಲ್ಮೀಕಿ ವಿರಚಿತ ರಾಮಾಯಣ ಮತ್ತು ಶ್ರೀ ವ್ಯಾಸ ವಿರಚಿತ ಮಹಾಭಾರತ ಮಹಾಕಾವ್ಯಗಳನ್ನು ಸಹ ಮಕ್ಕಳಿಗೆ ಬೋಧನೆ ಮಾಡುವುದು ಅಗತ್ಯ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಡಿಸೆಂಬರ್ 3, 2025 ರಂದು ಬರೆದಿರುವ ಈ ಪತ್ರದಲ್ಲಿ, ಭಗವದ್ಗೀತೆಯ ಬೋಧನೆಗಳು ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಸಹಾಯ ಮಾಡುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ದೇಶದ ಕೆಲವು ಸ್ಥಳೀಯ ನಾಯಕರು ಮತ್ತು ಪೋಷಕರು ಕೂಡ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ.

ಭಗವದ್ಗೀತೆಯು ಪ್ರತಿಪಾದಿಸುವ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದು ಮತ್ತು ವಸುಧೈವ ಕುಟುಂಬಕಂ (ಇಡೀ ವಿಶ್ವವೇ ಒಂದು ಕುಟುಂಬ) ಎಂಬ ಉದಾತ್ತ ಮೌಲ್ಯಗಳು ಇಂದಿನ ಜಾಗತಿಕ ಸನ್ನಿವೇಶದಲ್ಲಿ ಅತ್ಯಂತ ಪ್ರಸ್ತುತವಾಗಿವೆ. ಈ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವುದರಿಂದ ಆಗುವ ಪ್ರಯೋಜನಗಳನ್ನು ಕುಮಾರಸ್ವಾಮಿ ಅವರು ವಿವರಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನೈತಿಕ ಶಕ್ತಿ, ವಿಚಾರಗಳ ಸ್ಪಷ್ಟತೆ ಮತ್ತು ಉತ್ತಮ ಚಾರಿತ್ರ್ಯವನ್ನು ಬೆಳೆಸಲು ಭಗವದ್ಗೀತೆಯ ಬೋಧನೆಗಳು ಸಹಾಯಕವಾಗಿವೆ. ನಮ್ಮ ಯುವಜನರನ್ನು ವಿದ್ಯಾರ್ಥಿ ದೆಸೆಯಿಂದಲೇ ಉತ್ತಮ ಪ್ರಜೆಗಳಾಗಿ ರೂಪಿಸಲು ಮತ್ತು ಜಾಗತಿಕವಾಗಿ ಶ್ರೇಷ್ಠರಾಗಲು ಮತ್ತು ಅತ್ಯಂತ ಶ್ರೇಷ್ಠ, ಮಾನವೀಯತೆಯ ಭಾರತೀಯ ಪರಂಪರೆಯನ್ನು ಪುನರುಜ್ಜೀವನಗೊಳಿಸಲು ಭಗವದ್ಗೀತೆ ಬೋಧನೆಯು ಪ್ರಮುಖ ಹೆಜ್ಜೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ಭೇಟಿ ಸ್ಫೂರ್ತಿ

ಇತ್ತೀಚೆಗೆ ಪ್ರಧಾನಮಂತ್ರಿಗಳು ಉಡುಪಿಯ ಕೃಷ್ಣ ಮಠದ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಮತ್ತು ಶಿವಮೊಗ್ಗದಲ್ಲಿ ಗೀತಾ ಪಠಣ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದು ಈ ಪ್ರಸ್ತಾವಕ್ಕೆ ಸ್ಫೂರ್ತಿ ನೀಡಿದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಭಗವದ್ಗೀತೆಯ ಕಾಲಾತೀತ ಮೌಲ್ಯಗಳನ್ನು ದೇಶದಾದ್ಯಂತ ವಿದ್ಯಾರ್ಥಿಗಳಿಗೆ ಬೋಧಿಸಲು ಸೂಕ್ತ ನಿರ್ದೇಶನಗಳನ್ನು ತೆಗೆದುಕೊಳ್ಳುವಂತೆ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!