ಬೆಂಗಳೂರು: ಇಂದು ಆದಿಚುಂಚನಗಿರಿ ಮಠಕ್ಕೆ ಬಿಜೆಪಿ – ಜೆಡಿಎಸ್ ಒಕ್ಕಲಿಗ ನಾಯಕರ ದಂಡೇ ಆಗಮಿಸಿ, ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಮೂಲಕ ಮಠದ ಅಂಗಳದಲ್ಲಿ ಮೈತ್ರಿ ನಾಯಕರು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ, ಹೆಚ್.ಡಿ.ಕುಮಾರಸ್ವಾಮಿ,ಸಿ.ಟಿ.ರವಿ, ಜಿ.ಟಿ. ದೇವೇಗೌಡ, ಆರ್.ಅಶೋಕ್, ಸದಾನಂದ ಗೌಡ, ಡಾ.ಅಶ್ವತ್ ನಾರಾಯಣ್, ಡಾ.ಮಂಜುನಾಥ್, ಯದುವೀರ್ ಒಡೆಯರ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಒಕ್ಕಲಿಗ ನಾಯಕರು ಒಟ್ಟಾಗಿ ಮಠಕ್ಕೆ ಭೇಟಿ ನೀಡಿದ್ರು. ಮೈತ್ರಿ ನಾಯಕರೆಲ್ಲರೂ ಒಗ್ಗಟ್ಟು ಪ್ರದರ್ಶನ ತೋರಿದ್ದು, ಒಕ್ಕಲಿಗ ಮತಗಳ ಕ್ರೋಢೀಕರಿಸಲು ಮುಂದಾದ್ರು.

ಮಂಡ್ಯದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಲಿವೆ. ಮೈಸೂರಿನಲ್ಲಿ ಒಕ್ಕಲಿಗ ಮತಗಳೇ ಮುಖ್ಯ. ಬೆಂಗಳೂರು ಉತ್ತರದಲ್ಲೂ ಒಕ್ಕಲಿಗ ಪ್ರಾಬಲ್ಯ ಇದೆ. ಬೆ.ಗ್ರಾಮಾಂತರದಲ್ಲಿ ಒಕ್ಕಲಿಗರ ಮತಗಳೇ ನಿರ್ಣಾಯಕವಾಗಲಿದೆ. ಹಾಗೇ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳ ಮೇಲೆ ಮೈತ್ರಿ ನಾಯಕರ ಕಣ್ಣು ಬಿದ್ದಿದೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚಾಗಿರುವ ಒಕ್ಕಲಿಗ ಮತಗಳು ಕಾಂಗ್ರೆಸ್ ಗೆ ಹೋಗದಂತೆ ತಡೆಯಲು ಒಗ್ಗಟ್ಟಿನ ಪ್ರದರ್ಶನ ತೋರಿದ್ದಾರೆ.

ಕಾಂಗ್ರೆಸ್ ನಲ್ಲಿ ಒಕ್ಕಲಿಗ ನಾಯಕರಾಗಿ ಹೊರಹೊಮ್ಮಿರುವ ಡಿ.ಕೆ. ಶಿವಕುಮಾರ್ ಸಿಎಂ ಆಗ್ಬೇಕು ಅಂತ ಒಕ್ಕಲಿಗ ಸಮುದಾಯ ಬಯಸಿತ್ತು. ಆದರೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿಲ್ಲ. ಇದೀಗ ಒಕ್ಕಲಿಗ ಸಮುದಾಯಕ್ಕೆ ಸಂದೇಶ ನೀಡಲು ಮೈತ್ರಿ ನಾಯಕರ ಒಗ್ಗಟ್ಟಿನ ಪ್ರದರ್ಶನ ಮಾಡಿದ್ದಾರೆಂದೇ ಹೇಳಲಾಗ್ತಿದೆ.