ಸಕಲೇಶಪುರ : ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಲಾರಿ ಉರುಳಿ ಬಿದ್ದು ಲಾರಿ ಚಾಲಕ ಹಾಗೂ ನಿರ್ವಾಹಕ ಗಾಯಗೊಂಡಿರುವ ಘಟನೆ ಮಾರನಹಳ್ಳಿ ಗಡಿ ಕ್ರಾಸ್ ಬಳಿ ನಡೆದಿದೆ.
ಮಂಗಳೂರಿನಿಂದ-ಬೆಂಗಳೂರು ಕಡೆಗೆ ಸಿಮೆಂಟ್ ಶೀಟ್‌ಗಳನ್ನು ತುಂಬಿಕೊಂಡು ತೆರಳುತ್ತಿದ್ದ ಲಾರಿ ಮಾರನಹಳ್ಳಿ ಗಡಿಯಲ್ಲಿರುವ ತಿರುವಿನಲ್ಲಿ ಹಳ್ಳಕ್ಕೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಸಣ್ಣ ಪ್ರಮಾಣದ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಡೆಗೋಡೆ ಇಲ್ಲದ ಕಾರಣ ಪದೇ ಪದೇ ಇದೇ ತಿರುವಿನಲ್ಲಿ ನಿಯಂತ್ರಣ ಸಿಗದೆ ಹಳ್ಳಕ್ಕೆ ವಾಹನಗಳು ಬೀಳುತ್ತಿದ್ದು ತಡೆಗೋಡೆ ನಿರ್ಮಿಸುವಂತೆ ಹಲವು ಬಾರಿ ಸಾರ್ವಜನಿಕರು ಮನವಿ ಮಾಡಿದ್ದಾರೆ. ಆದರೆ ಸಂಬಂಧಿಸಿದ ಅಧಿಕಾರಿಗಳು ತಡೆಗೋಡೆ ನಿರ್ಮಿಸದೆ ಬೇಜವಾಬ್ದಾರಿ ತೋರಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಕಲೇಶಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.