ಹಾಸನ: ಜೀವನ ನಾವಂದುಕೊಂಡಂಗೆ ಇರಲ್ಲ. ಏರಿಳಿತಗಳು ಆಗುತ್ತಲೇ ಇರುತ್ತೆ.. ಧುತ್ತನೇ ಎದುರಾಗುವ ಕಷ್ಟಗಳನ್ನ ಎದುರಿಸೋದು ಅಷ್ಟು ಸುಲಭವಲ್ಲ. ಇವರ ಬದುಕಿನಲ್ಲಿ ಆಗಿದ್ದು ಅಷ್ಟೇ. ಸ್ವಾಭಿಮಾನದ ಜೀವನವನ್ನ ಕಟ್ಟಿಕೊಂಡಿದ್ದ ನಂದೀಶ್-ಕೃಪಾ ಅವರ ಸದ್ಯದ ಬದುಕು, ಆ ದೇವರಿಗೆ ಪ್ರೀತಿ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಕರಾಟೆ ಶಾಲೆಯನ್ನ ತೆರೆದು ಯುವ ಸಮೂಹವನ್ನ ಸಧೃಡ ಮಾಡಬೇಕು ಅನ್ನೋ ಕನಸನ್ನ ಹೊಂದಿದ್ರು. ಅದೆಷ್ಟೋ ವಿದ್ಯಾರ್ಥಿಗಳಿಗೆ ಕರಾಟೆ ಕಲಿಸುವ ಮೂಲಕ ಅದೇ ದಾರಿಯಲ್ಲಿ ಸಾಗುತ್ತಿದ್ರು ಕೂಡ. ಆದ್ರೆ ಈ ದಂಪತಿ ಬಾಳಲ್ಲಿ ವಿಧಿ ಆಡ್ತಿರೋ ಆಟ ಅಷ್ಟಿಷ್ಟಲ್ಲ.
ಕಳೆದ ಎರಡು ವರ್ಷದ ಹಿಂದೆ ನಂದೀಶ್ ಕೋವಿಡ್ ಬಾಧಿತರಾಗಿದ್ರು. ಆ ಸಮಯದಲ್ಲಿ ಹೆಚ್ಚು ಇಂಜೆಕ್ಷನ್ ತೆಗೆದುಕೊಂಡ ಪರಿಣಾಮ ಕಳೆದ 6 ತಿಂಗಳಿನಿಂದ ಹಾಸಿಗೆ ಹಿಡಿದಿದ್ದಾರೆ. ಎವಿಐ ಮೂಳೆಗೆ ಸಂಬಂಧಿಸಿದ ಕಾಯಿಲೆಯಿಂದ ಬೆನ್ನು ಮೂಳೆಗಳು ಸ್ವಾಧೀನ ಕಳೆದುಕೊಂಡು, ಮೇಲೆ ಎದ್ದೇಳಲು ಸಾಧ್ಯವಾಗ್ತಿಲ್ಲ. ಈಗಾಗಲೇ ಚಿಕಿತ್ಸೆಗಾಗಿ ಬೆಂಗಳೂರು, ಹಾಸನ, ಮಣಿಪಾಲ್ ನಗರಗಳಲ್ಲಿ 12 ಲಕ್ಷಕ್ಕೂ ಅಧಿಕ ಖರ್ಚು ಮಾಡಿದ್ದಾರೆ. ಇನ್ನೂ ನಂದೀಶ್ ಮೊದಲಿನಂತಾಗಲೂ ಕನಿಷ್ಠ 20 ಲಕ್ಷ ಬೇಕು ಅಂತಾ ವೈದ್ಯರು ಹೇಳಿರೋದು , ದಂಪತಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂಗಾಗಿದೆ ಕಳೆದ 7 ವರ್ಷದಿಂದ ಕರಾಟೆ ಶಾಲೆ ನಡೆಸುತ್ತಾ ಅದೆಷ್ಟೋ ವಿದ್ಯಾರ್ಥಿಗಳನ್ನ ದೈಹಿಕವಾಗಿ ಗಟ್ಟಿ ಮಾಡಿದ್ದ ನಂದೀಶ್, ಇದೀಗ ತಾನು ಮೇಲೆಳಲು ಆಗದೇ ಹಾಸಿಗೆ ಹಿಡಿದಿರೋದು ನಿಜಕ್ಕೂ ವಿಪರ್ಯಾಸವೇ ಸರಿ.

ಇನ್ನೂ 9 ತಿಂಗಳು ತುಂಬು ಗರ್ಭಿಣಿಯಾಗಿರೋ ಪತ್ನಿ ಕೃಪಾಗೆ ತನ್ನ ಹೊಟ್ಟೆಯಲ್ಲಿರೋ ಮಗುವನ್ನ ನೋಡಿಕೊಳ್ಳುವುದ್ದಕ್ಕಿಂತ ಹಾಸಿಗೆ ಹಿಡಿದಿರೋ ಗಂಡನನ್ನ ನೋಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಒಂದೆಡೆ ಪತಿಗೆ ಚಿಕಿತ್ಸೆ ಕೊಡಿಸಲು ಹಣಕಾಸಿನ ಸಮಸ್ಯೆ ಎದುರಾಗಿದ್ದು, ಮತ್ತೊಂದೆಡೆ ಸ್ವತಃ ತಾನು ಕರಾಟೆ ಮಾಸ್ಟರ್ ಆಗಿದ್ದ ಕೃಪಾಗೆ, ಸದ್ಯ ದುಡಿಯೋಕೂ ಸಾಧ್ಯ ಆಗ್ತಿಲ್ಲ. ಸ್ವಾಭಿಮಾನದ ಬದುಕನ್ನ ಕಟ್ಟಿಕೊಂಡಿದ್ದ ದಂಪತಿ ಇಲ್ಲಿಯವರೆಗೂ ಯಾರಿಂದಲೂ ಏನನ್ನೂ ಕೇಳಿರಲಿಲ್ಲ. ಆದ್ರೆ ಈಗ ವಿಧಿ ಇವರನ್ನ ಪರೀಕ್ಷೆ ಮಾಡ್ತಿದ್ದು, ಅನಿವಾರ್ಯವಾಗಿ ನಿಮ್ಮ ಮುಂದೆ ದಂಪತಿ ಕೈ ಚಾಚಿದ್ದಾರೆ.

ನನ್ನ ಹುಷಾರ್ ಮಾಡಿ, ಒಲಿಂಪಿಕ್ ಗೆ ಕರಾಟೆ ಕಲಿಗಳನ್ನ ಕಳುಹಿಸುತ್ತೇನೆ ಅಂತಾ ನಂದೀಶ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ಪತಿಯನ್ನ ಮೊದಲಿನಂತೆ ಆಗಲು ಸಹಾಯ ಮಾಡಿ ಅಂತಾ ಕೃಪಾ ಕೈ ಮುಗಿದು ಬೇಡಿಕೊಂಡಿದ್ದಾರೆ. ಈಗಾಗಲೇ ಒಂದಷ್ಟು ಜನರು ನೆರವಿನ ಹಸ್ತ ನೀಡಿದ್ದಾರೆ. ಸಹೃದಯಿಗಳು ನೀವು ಮನಸ್ಸು ಮಾಡಿದ್ರೆ, ಕರಾಟೆ ಮಾಸ್ಟರ್ ನಂದೀಶ್ ಮೊದಲಿನಂತಾಗಿ, ಕೃಪಾ ಹಾಗೂ ಮುಂದೆ ಹುಟ್ಟುವ ಮಗುವಿನ ಮೊಗದಲ್ಲಿ ನಗು ಮೂಡಲು ಕಾರಣಿಭೂತರಾಗ್ತೀರಿ. ನೀವು ನೀಡುವ ಒಂದೊಂದು ರೂಪಾಯಿ ಕೂಡ ಈ ದಂಪತಿ ಬಾಳಲ್ಲಿ ಜೀವನೋತ್ಸಹ ಹೆಚ್ಚಿಸೋದ್ರಲ್ಲಿ ಸಂದೇಹವೇ ಇಲ್ಲ.!