ಕೊಟ್ಟಿಗೆಹಾರ: ಗ್ರಾಮೀಣ ಪ್ರದೇಶದಲ್ಲಿ ಮರೆಯಾಗುತ್ತಿರುವ ಪರಿಶೆ ಪದವು ಇತ್ತೀಚೆಗೆ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ ಎಂದು ಚಿಂತಕ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.

ಇತ್ತೀಚೆಗೆ ಜರುಗಿದ ನೀಲಕುರಿಂಜಿ ಕಾರ್ಯಕ್ರಮದಲ್ಲಿ ಪುಸ್ತಕ ಪರಿಶೆಯ ಭಿತ್ತಿಪತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುವ ಆತಂಕದ ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪುಸ್ತಕ ಸಂತೆ ಎಂದು, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ಪುಸ್ತಕ ಪರಿಶೆ ಎನ್ನುವ ಕಾರ್ಯಕ್ರಮದ ಮೂಲಕ ಪುಸ್ತಕ ಸಂಸ್ಕೃತಿಗೆ ಹೆಚ್ಚಿನ ಒತ್ತನ್ನು ಕೊಡುವ ಮುಖೇನ ಓದುಗರಿಗೆ ಜ್ಞಾನದ ಅರಿವನ್ನು ವಿಸ್ತಿರಿಸುವ ಮತ್ತು ಬರಹಗಾರರಿಗೆ ಬರೆಯುವ ಕೌಶಲ್ಯವನ್ನು ತುಂಬುವಂತಹ ವಿನೂತನ ಪ್ರಯೋಗವನ್ನು ಕನಸುಗಳ ಇನ್ಫಿನಿಟಿ ಮತ್ತು ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ಮಾಡುತ್ತಿರುವುದು ಅತ್ಯಂತ ಸ್ತುತ್ಯರ್ಹ ಕಾರ್ಯವಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಮಾತನಾಡಿ ಪರಿಶೆ ಎನ್ನುವುದು ಹಳೆ ತಲೆಮಾರಿಗೆ ಚಿರಪರಿಚಿತ ಪದವಾದರೂ ಇಂದಿನ ಹೊಸ ತಲೆಮಾರಿಗೆ ಪರಿಶೆಯ ಪದಪ್ರಯೋಗದ ಪರಿಚಯವನ್ನು ಮಾಡಿಕೊಡಬೇಕಿದೆ. ಪರಿಶೆ ಎನ್ನುವುದಕ್ಕೆ ನಿಘಂಟಿನಲ್ಲಿ ಬಹಳಷ್ಟು ಅರ್ಥಗಳಿದ್ದರೂ ಅದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಜನರ ನಂಬಿಕೆ ಮತ್ತು ಅವರ ಪರಂಪರೆಯನ್ನು ಬಿಂಬಿಸುವ ಸಂಭ್ರಮವೇ ಪರಿಶೆಯಾಗಿದೆ. ಪುಸ್ತಕ ಪ್ರಪಂಚದಲ್ಲಿ ಈ ರೀತಿಯ ಹಬ್ಬಗಳು ಆಗುತ್ತಿರುವುದು ಕ್ರಿಯಾಶೀಲತೆಯನ್ನು ಮತ್ತು ಹೊಸ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದರು.
ವೇದಿಕೆಯಲ್ಲಿ ವಿಮರ್ಶಕ ಡಾ. ಎಚ್. ಎಸ್. ಸತ್ಯನಾರಾಯಣ, ಗಾಯಕ ನಾದ ಮಣಿನಾಲ್ಕೂರು, ಆಯೋಜಕರಾದ ಪೃಥ್ವಿ ಸೂರಿ, ನಂದೀಶ್ ಬಂಕೇನಹಳ್ಳಿ, ಲೇಖಕ ಶ್ರೀನಿವಾಸ ನಾಯ್ಡು ಉಪಸ್ಥಿತರಿದ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ ನಾಡೋಜ ಡಾ. ಗೊ. ರು. ಚನ್ನಬಸಪ್ಪ ಶೀರ್ಷಿಕೆ ಅನಾವರಣಗೊಳಿಸಿ ಮಾತನಾಡಿದ ಅವರು ಲೇಖಕರು ಪುಸ್ತಕ ಬರೆದು ಮಾರುಕಟ್ಟೆಯಲ್ಲಿ ಅಧಿಪತ್ಯವನ್ನು ಸ್ಥಾಪಿಸಿ ವ್ಯಾವಹಾರಿಕವಾಗಿ ಹೇಗೆ ತಮ್ಮ ಛಾಪನ್ನು ಮೂಡಿಸಬಹುದು ಎನ್ನುವ ಹಿತ ದೃಷ್ಟಿಯಿಂದ ಪುಸ್ತಕ ಪರಿಶೆಯಲ್ಲಿ ಗಂಭೀರ ಚರ್ಚೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
