ಮಂಗಳೂರು : ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಆದ್ರೂ ಅದರ ಚಿತ್ರೀಕರಣ ಮಾಡೋದು ಸಾಮಾನ್ಯ. ಅದರಲ್ಲೂ ಇನ್ನೂ ಅತ್ಯಾಕರ್ಷಕವಾಗಿ ಅದನ್ನ ತೋರಿಸ್ಬೇಕು ಅಂತ ಅಂದುಕೊಳ್ಳುವ ಉತ್ಸಾಹಿ ಮಂದಿ ಡ್ರೋನ್ ಕ್ಯಾಮರಾ ಬಳಸಿ ವಿವಿಧ ಕೋನಗಳಿಂದ ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಾರೆ. ಆದ್ರೆ ಡ್ರೋನ್ ಬಳಸುವವರು ಅಷ್ಟೇ ಎಚ್ಚರವಾಗಿರಬೇಕು. ನುರಿತರು ಮಾತ್ರ ಇದರ ಪ್ರಯೋಗ ಮಾಡೋಕೆ ಸಾಧ್ಯ. ಕೊಂಚ ಯಾಮಾರಿದ್ರೂ ದೊಡ್ಡ ಮಟ್ಟದ ಅಪಾಯ ಎದುರಾಗೋದು ನಿಶ್ಚಿತ.
ಇಷ್ಟೆಲ್ಲಾ ಪೀಟಿಕೆ ಯಾಕಂದ್ರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರೋನ್‌ನಿಂದ ಸಂಭವಿಸಬಹುದಾದ ಅನಾಹುತ ಅಲ್ಪದರಲ್ಲೇ ತಪ್ಪಿದೆ. ಬಂಟ್ವಾಳ ತಾಲೂಕಿನ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ರಥೋತ್ಸವದ ವೇಳೆ ವ್ಯಕ್ತಿಯೊಬ್ಬ ಡ್ರೋನ್ ಹಾರಿಸಿ ಚಿತ್ರೀಕರಣ ಮಾಡುತ್ತಿದ್ದ. ರಥದ ಎದುರು ಅರ್ಚಕರು ಉತ್ಸವ ಮೂರ್ತಿಯನ್ನು ಹೊತ್ತು ನಿಂತಿದ್ದರು. ಅದರ ಶೂಟ್ ಮಾಡುತ್ತಿದ್ದ ಕ್ಯಾಮರಾ ಹಿಂದಕ್ಕೆ ಚಲಿಸುವ ಬದಲು ನೇರವಾಗಿ ಮೂರ್ತಿಯತ್ತ ಹಾರಿದೆ. ಅಲಂಕಾರಗೊಂಡಿದ ಮೂರ್ತಿಯ ಬಲಭಾಗಕ್ಕೆ ಬಡಿದು ಕೆಳಗೆ ಬಿದ್ದಿದೆ. ಪಕ್ಕದಲ್ಲೇ ಇದ್ದ ಮತ್ತೊಬ್ಬ ಅರ್ಚಕರು ಅದನ್ನು ಕಾಲಿನಿಂದ ಒದ್ದು ಕೆಳಗೆ ಹಾಕಿದ್ದಾರೆ.
ಕೊಂಚ ಅತ್ತಿತ್ತ ಹಾರಿದ್ದರೂ ಅದು ಯಾರಾದರು ಒಬ್ಬ ಅರ್ಚಕರ ದೇಹಕ್ಕೆ ಬಡಿಯುತ್ತಿತ್ತು. ನಿಮಗೆಲ್ಲ ಗೊತ್ತೇ ಇದೆ ಡ್ರೋನ್ ಕ್ಯಾಮರಾದ ರೆಕ್ಕೆಗಳು ಎಷ್ಟು ವೇಗದಲ್ಲಿ ತಿರುಗುತ್ತಿರುತ್ತದೆ. ಅವುಗಳು ತಾಕಿದರೆ ಏನಾಗಬಹುದು ಅಂತ. ಆದರೆ ಅದೃಷ್ಟವಶಾತ್ ಅಂಥದ್ದೇನು ಆಗಲಿಲ್ಲ. ದೇವರ ದಯೆಯಿಂದ ದೊಡ್ಡ ಅನಾಹುತ ತಪ್ಪಿದೆ ಅಂತ ಭಕ್ತರು ಮಾತಾಡಿಕೊಳ್ಳುತ್ತಿದ್ದರು.
