ಚಿಕ್ಕಮಗಳೂರು: ಬೀದರ್ ತಾಲೂಕಿನ ಕಮಠಾಣ ಸಮೀಪದ ನಂದಿನಗರದ ಕರ್ನಾಟಕ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲದಲ್ಲಿ ಜನವರಿ 17 ರಿಂದ 19ರ ವರೆಗೆ ನಡೆದ ಜಾನುವಾರು, ಕುಕ್ಕುಟ, ಮತ್ಸ್ಯ ಮೇಳದಲ್ಲಿ ಚಿಕ್ಕಮಗಳೂರಿನ ಪ್ರಗತಿಪರ ಕೃಷಿಕ ಅಮರ್ ಡಿಸೋಜ ಅವರು ಚಿಕ್ಕಮಗಳೂರು ಜಿಲ್ಲೆಯ ‘ಶ್ರೇಷ್ಠ ರೈತ’ ಎಂಬ ಗೌರವಕ್ಕೆ ಭಾಜನವಾಗಿದ್ದಾರೆ. ತಾಲೂಕಿನ ಮಡೇನೆರಳು ಗ್ರಾಮದಲ್ಲಿ 25 ಎಕರೆ ಜಮೀನಿನಲ್ಲಿ 20 ಎಕರೆಯಲ್ಲಿ ಕಾಫಿ, ಕಾಳು ಮೆಣಸು, ಅಡಿಕೆ, ಭತ್ತ, ಸಿಲ್ವರ್ ಮರಗಳನ್ನು ಬೆಳೆದಿದ್ದು ಎರಡು ಎಕರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಉಳಿದಿರುವ ಜಾಗದಲ್ಲಿ ಹಂದಿ ತಳಿ ಸಂವರ್ಧನೆ, ಹಸು, ಕುರಿ, ಕೋಳಿ ಸಾಕಾಣಿಕೆ ಯಶಸ್ವಿ ರೈತರಾಗಿರುವ ಇವರಿಗೆ ಹಲವು ಅತ್ಯುನ್ನತ ಪ್ರಶಸ್ತಿಗಳು ಒಲಿದು ಬಂದಿವೆ.


ನಿಷ್ಠೆಯಿಂದ ಕೃಷಿಯಲ್ಲಿ ತೊಡಗಿಸಿಕೊಳ್ಳಿ-ಅಮರ್ ಡಿಸೋಜಾ
ಅನೇಕ ವರ್ಷಗಳಿಂದ ಕೃಷಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಬಂದಿರುವ ಇವರು, ಕೃಷಿಯಿಂದ ವಿಮುಖರಾಗುತ್ತಿರುವ ಅದೆಷ್ಟೋ ಮಂದಿಗೆ ಮಾದರಿ. ನಿಷ್ಠೆಯಿಂದ ಕೃಷಿಯನ್ನ ಮಾಡಿಕೊಂಡು ಬಂದರೆ, ಕೃಷಿಯಲ್ಲಿ ಸಿಗುವ ಉತ್ಪಾದನೆ, ನೆಮ್ಮದಿ, ಬೇರೆಲ್ಲೂ ಸಿಗುವುದಿಲ್ಲ ಅನ್ನೋದನ್ನ ಅಮರ್ ಡಿಸೋಜಾರವರು ಈಗಾಗಲೇ ಸಾಬೀತು ಮಾಡಿದ್ದಾರೆ. ಕೃಷಿಯಲ್ಲಿ ನೀವು ಯಶಸ್ಸು ಕಾಣಬೇಕೆಂದರೆ, ಪೂರ್ಣ ಮನಸ್ಸಿನಿಂದ ನಿಮ್ಮನ್ನ ನೀವು ತೊಡಗಿಸಿಕೊಳ್ಳಿ, ಆಗ ಖಂಡಿತವಾಗಿಯೂ ನಿಮ್ಮನ್ನ ಕೃಷಿ ಕೈಬಿಡಲ್ಲ ಅನ್ನೋದು ಅವರು ನಿಲುವು. ಸುಮ್ಮನೇ ಕಾಟಾಚಾರಕ್ಕೆ ಕೃಷಿ ಮಾಡಿದ್ರೆ ಅದರಲ್ಲಿ ನೀವು ಏಳಿಗೆ ಕಾಣೋದು ಕಷ್ಟಸಾಧ್ಯ ಅಂತಾರೆ ಅಮರ್ ಡಿಸೋಜಾ. ಇನ್ನೂ ಕೃಷಿ ಜೊತೆಗೆ ಮೀನು ಸಾಕಾಣಿಕೆ, ಹಂದಿ ತಳಿ ಸಂವರ್ಧನೆ, ಹಸು-ಕುರಿ, ಕೋಳಿ ಸಾಕಾಣಿಕೆ ಮಾಡೋದ್ರ ಮೂಲಕ ಮನಸ್ಸಿದ್ದರೆ ಮಾರ್ಗ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ ಅಮರ್ ಡಿಸೋಜಾರವರು. ಶ್ರೀಯುತರಿಗೆ ಮತ್ತಷ್ಟು ಪ್ರಶಸ್ತಿಗಳು ಒಲಿದು ಬರಲಿ ಅನ್ನೋದು ಪಬ್ಲಿಕ್ ಇಂಪ್ಯಾಕ್ಟ್ ಆಶಯ.
