ನವದೆಹಲಿ: ಅರಾವಳಿ ಪರ್ವತ ಶ್ರೇಣಿಯ ವ್ಯಾಖ್ಯಾನ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ನೀಡಿದ್ದ ಮಹತ್ವದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಈ ವಿಚಾರದಲ್ಲಿ ಇನ್ನಷ್ಟು ವೈಜ್ಞಾನಿಕ ಸ್ಪಷ್ಟತೆ ಅಗತ್ಯವಿದ್ದು, ತಜ್ಞರ ಸಮಿತಿಯ ಮರುಪರಿಶೀಲನೆಗೆ ನ್ಯಾಯಾಲಯ ಸೂಚಿಸಿದೆ.
ತಜ್ಞರ ಸಮಿತಿಗೆ ಹೊಣೆ
ಈ ಹಿಂದೆ ರಚನೆಯಾಗಿದ್ದ ಸಮಿತಿಯಲ್ಲಿ ಹೆಚ್ಚಾಗಿ ಆಡಳಿತಾತ್ಮಕ ಅಧಿಕಾರಿಗಳೇ ಇದ್ದರು ಎಂಬುದನ್ನು ನ್ಯಾಯಪೀಠವು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ, ಅರಾವಳಿ ಪರ್ವತ ಶ್ರೇಣಿಯ ವ್ಯಾಪ್ತಿಯನ್ನು ನಿರ್ಧರಿಸಲು ಈ ಹಿಂದೆ ನೀಡಿದ್ದ ಶಿಫಾರಸುಗಳ ಪರಿಸರ ಪರಿಣಾಮಗಳನ್ನು ಪರಿಣಿತ ತಜ್ಞರ ಸಮಿತಿಯು ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಕೇಂದ್ರ ಮತ್ತು ನಾಲ್ಕು ರಾಜ್ಯಗಳಿಗೆ ನೋಟಿಸ್
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು ಈ ಆದೇಶ ನೀಡಿದೆ. ಗಣಿಗಾರಿಕೆ ಚಟುವಟಿಕೆಗಳ ಮೇಲೆ ಇದು ನೇರ ಪರಿಣಾಮ ಬೀರುವುದರಿಂದ, ಕೇಂದ್ರ ಸರ್ಕಾರ ಸೇರಿದಂತೆ ಅರಾವಳಿ ವ್ಯಾಪ್ತಿಗೆ ಬರುವ ರಾಜಸ್ಥಾನ, ಗುಜರಾತ್, ದೆಹಲಿ ಮತ್ತು ಹರಿಯಾಣ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ವಿವಾದದ ಹಿನ್ನೆಲೆ
ಅರಾವಳಿ ಬೆಟ್ಟಗಳಿಗೆ ಏಕರೂಪದ ಮತ್ತು ವೈಜ್ಞಾನಿಕ ವ್ಯಾಖ್ಯಾನ ನೀಡುವ ವಿಚಾರವು ವ್ಯಾಪಕ ವಿವಾದಕ್ಕೆ ಕಾರಣವಾಗಿತ್ತು. ನವೆಂಬರ್ 20 ರಂದು ನೀಡಿದ್ದ ತೀರ್ಪಿನಲ್ಲಿ, ತಜ್ಞರ ವರದಿ ಅಂತಿಮಗೊಳ್ಳುವವರೆಗೆ ನಾಲ್ಕೂ ರಾಜ್ಯಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ ನೀಡದಂತೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿತ್ತು. ಇದೀಗ ಈ ಆದೇಶಕ್ಕೆ ತಡೆ ಬಿದ್ದಿರುವುದರಿಂದ ಗಣಿಗಾರಿಕೆ ವಲಯದಲ್ಲಿ ಹಲವುಪ್ರೆಶ್ನೆ ಮೂಡಿದೆ. ಪ್ರಕರಣದ ಮುಂದಿನ ವಿಚಾರಣೆ ಜನವರಿ 21 ರಂದು ನಡೆಯಲಿದೆ.
