ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ರಾಟ್‌ವೀಲರ್ ತಳಿಯ ನಾಯಿಯೊಂದಕ್ಕೂ ನಾಗರಹಾವಿನ ನಡುವೆ ನಡೆದ ಭೀಕರ ಕಾಳಗದ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು ಕೊನೆಗೆ ಎರಡೂ ಪ್ರಾಣಿಗಳು ಜೀವ ಕಳೆದುಕೊಂಡಿವೆ.
ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಪೈಪೋಟಿ ಗ್ರಾಮಸ್ಥರಲ್ಲಿ ಆತಂಕ ಮತ್ತು ಅಚ್ಚರಿಯನ್ನು ಮೂಡಿಸಿದೆ.ಗ್ರಾಮದ ನಿವಾಸಿಯೊಬ್ಬರ ಮನೆಯ ಆವರಣದಲ್ಲಿ ಈ ಘಟನೆ ನಡೆದಿದೆ.
ಏಕಾಏಕಿ ಎದುರಾದ ನಾಗರಹಾವನ್ನು ಕಂಡ ನಾಯಿ, ತನ್ನ ಸ್ವಭಾವದಂತೆ ಹಾವಿನ ಮೇಲೆ ದಾಳಿ ನಡೆಸಿದೆ. ಇದರಿಂದ ಹಾವು ಕೂಡ ಪ್ರತಿದಾಳಿ ನಡೆಸಿ ನಾಯಿಯನ್ನು ಹಲವು ಬಾರಿ ಕಚ್ಚಿತು.
ಕಾಳಗದ ಅಂತ್ಯದಲ್ಲಿ ನಾಯಿ ತನ್ನ ಬಲಿಷ್ಠ ದವಡೆಹಲ್ಲುಗಳಿಂದ ನಾಗರಹಾವನ್ನು ಸಂಪೂರ್ಣವಾಗಿ ಕಚ್ಚಿ ಕೊಂದಿದೆ. ಆದರೆ ನಾಗರಹಾವಿನ ವಿಷಕಾರಿ ಕಡಿತದಿಂದ ನಾಯಿ ಕೂಡ ತೀವ್ರವಾಗಿ ಗಾಯಗೊಂಡಿತ್ತು.
ಹಾವನ್ನು ಸಾಯಿಸಿದ ಬಳಿಕ ನಾಯಿ ತನ್ನ ಬೋನಿಗೆ ತೆರಳಿ ಮಲಗಿಕೊಂಡಿದ್ದು, ಸ್ವಲ್ಪ ಸಮಯದ ಬಳಿಕ ಅಲ್ಲಿಯೇ ಉಸಿರು ಚೆಲ್ಲಿದೆ. ಹಾವಿನ ವಿಷ ನಾಯಿಯ ದೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಚಿಕಿತ್ಸೆ ದೊರಕುವ ಮುನ್ನವೇ ನಾಯಿ ಮೃತಪಟ್ಟಿದೆ.
ಘಟನೆಯ ಬಳಿಕ ಮನೆಯವರು ನಾಗರಹಾವಿಗೆ ಶಾಸ್ರೋಕ್ತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ನಾಯಿ ತನ್ನ ಮಾಲೀಕರನ್ನು ಹಾಗೂ ಮನೆ ಆವರಣವನ್ನು ರಕ್ಷಿಸುವ ಪ್ರಯತ್ನದಲ್ಲಿ ಪ್ರಾಣ ತ್ಯಾಗ ಮಾಡಿದೆ.
ಹಾವು ತನ್ನ ಪ್ರಾಣ ಉಳಿಸಿಕೊಳ್ಳಲು ಹೋರಾಟ ಮಾಡಿದ್ದು, ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಇಟ್ಟಿಗೆ ಗ್ರಾಮದಲ್ಲಿ ಸಂಭವಿಸಿದ್ದು, ನಾಯಿ-ಹಾವು ನಡುವಿನ ದುಃಖಕರ ಕಾಳಗದ ವೀಡಿಯೋ ವೈರಲ್ ಆಗಿದೆ.
