ಚಿಕ್ಕಮಗಳೂರು: ಕರ್ನಾಟಕದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದೇವಸ್ಥಾನಗಳು, ಮಠ, ಮಂದಿರಗಳು, ಇವೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಈ ದೇವಸ್ಥಾನ ಮಾತ್ರ ವಿಶೇಷವಾಗಿದ್ದು ಪ್ರತಿನಿತ್ಯ ಇಲ್ಲಿ ಕನ್ನಡದಲ್ಲಿಯೇ ಮಂತ್ರ, ಕನ್ನಡದಲ್ಲಿಯೇ ಪೂಜೆ, ಕನ್ನಡದಲ್ಲಿಯೇ ಹೋಮ, ಕನ್ನಡದಲ್ಲಿ ಶ್ಲೋಕ ಪಠಣ, ಕನ್ನಡದಲ್ಲೇ ಪೂಜೆ ನಡೆಯಲಿದ್ದು ಇಲ್ಲಿ ಎಲ್ಲವೂ ಕನ್ನಡಮಯವಾಗಿದೆ.

ಹೌದು, ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಅದ್ಧೂರಿಯಾಗಿ ಕೋದಂಡ ರಾಮನ ಬ್ರಹ್ಮ ರಥೋತ್ಸವ ಜರುಗಿತು. ಈ ರಥೋತ್ಸವಕ್ಕೆ ಜಿಲ್ಲೆಯ ಮೂಲೆ ಮೂಲೆಯಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಈ ರಥೋತ್ಸವದಲ್ಲಿ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.
ಚಿಕ್ಕಮಗಳೂರಿನ ಹೊರ ವಲಯದಲ್ಲಿ ಇರುವ ಹಿರೇಮಗಳೂರಿನ ಕೋದಂಡ ರಾಮ ಚಂದ್ರ ಸ್ವಾಮಿ ದೇವಸ್ಥಾನದ ಅದ್ಧೂರಿ ಬ್ರಹ್ಮ ರಥೋತ್ಸವ ನಡೆದಿದೆ. ಕನ್ನಡದ ಖ್ಯಾತ ಪೂಜಾರಿ ಅಂತ ಕರೆಸಿಕೊಳ್ಳೋ ಹಿರೇಮಗಳೂರು ಕಣ್ಣನ್ ಮಾಮ ಅವರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಹಲವು ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಜಾತ್ರಾ ಮಹೋತ್ಸವ ಹಿನ್ನೆಲೆ ಒಂದು ವಾರದಿಂದಲೂ ಇಡೀ ಗ್ರಾಮವೇ ಹಬ್ಬದ ಸಂಭ್ರಮದಲ್ಲಿ ಮುಳುಗಿತ್ತು. ದೇವಸ್ಥಾನದಲ್ಲಿ ವಿವಿಧ ರೀತಿಯ ಧಾರ್ಮಿಕ ಆಚರಣೆಗಳು, ಗರುಡೋತ್ಸವ, ಪಲ್ಲಕಿ ಉತ್ಸವ ಸೇರಿದಂತೆ ನಾನಾ ರೀತಿಯ ಸೇವೆಗಳನ್ನು ಶ್ರೀ ರಾಮನಿಗೆ ಅರ್ಪಿಸಲಾಯಿತು.
