ಕನ್ನಡದ ಆಸ್ತಿ ಚಂದನವನದ ಕುಳ್ಳ ಎಂದೇ ಖ್ಯಾತರಾದ ಹಿರಿಯ ನಟ ದ್ವಾರಕೀಶ್ ಹೃದಯಾಘಾತದಿಂದ ಇಂದು ಕೊನೆಯುಸಿರೆಳಿದ್ದಾರೆ. ನಟ ದ್ವಾರಕೀಶ್ ಕನ್ನಡ ಚಿತ್ರರಂಗದಲ್ಲಿ ಮೇರು ನಟರಾದ ಡಾ. ರಾಜ್‌ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್ ಸೇರಿದಂತೆ ಅನೇಕರ ಜೊತೆ ಸಿನಿಮಾಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಚಂದನವನದ ಕುಳ್ಳ ಎಂದೇ ಖ್ಯಾತಿ ಗಳಿಸಿದ್ದರು. ದ್ವಾರಕೀಶ್ ತಮ್ಮ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ “ವೀರ ಸಂಕಲ್ಪ” ಚಿತ್ರದಲ್ಲಿ ರಾಜಕುಮಾರನ ಸಣ್ಣ ಪಾತ್ರವನ್ನು ಮಾಡುವ ಮೂಲಕ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು.

ಅದರಲ್ಲೂ ನಟ ವಿಷ್ಣುವರ್ಧನ್ ರವರ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಕಾಲದಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಕುಚಿಕು ಗೆಳೆಯರು ಎಂದರೆ ವಿಷ್ಣುವರ್ಧನ್ ಹಾಗೂ ದ್ವಾರಕೀಶ್. ವಿಷ್ಣುವರ್ಧನ್ ಜೊತೆ ಇಷ್ಟೊಂದು ಮಧುರ ಬಾಂಧವ್ಯ ಹೊಂದಿದ್ದ ಪ್ರಚಂಡ ಕುಳ್ಳ ದ್ವಾರಕೀಶ್ ರವರು ಆಪ್ತಮಿತ್ರ ಸಿನಿಮಾ ರೀಲಿಸ್ ವೇಳೆ ವಿಷ್ಣು ರವರ ಬಗ್ಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಸ್ಯಾಂಡಲ್‌ವುಡ್‌ನಲ್ಲಿ ಕುಚಿಕು ಗೆಳೆಯರಾದ ದ್ವಾರಕೀಶ್- ವಿಷ್ಣುವರ್ಧನ್ ರವರ ನಡುವೆ ಬಿರುಕು ಮೂಡುವಂತೆ ಮಾಡಿತ್ತು ಎನ್ನಲಾಗಿದೆ.
ದ್ವಾರಕೀಶ್ ನಟಿಸಿರುವ ಸಿನಿಮಾಗಳು
ಗುರು ಶಿಷ್ಯರು, ರಾಜಕುಳ್ಳ, ಕಳ್ಳಕುಳ್ಳ, ಅದೃಷ್ಟವಂತ, ನ್ಯಾಯ ಎಲ್ಲಿದೆ, ಪೆದ್ದ ಗೆದ್ದ, ಪ್ರಚಂಡ ಕುಳ್ಳ, ಕಿಟ್ಟುಪುಟ್ಟು, ಸಿಂಗಾಪೂರಿನಲ್ಲಿ ಮಂಕುತಿಮ್ಮ, ಪೊಲೀಸ್ ಪಾಪಣ್ಣ, ಆಪ್ತಮಿತ್ರ, ಮುದ್ದಿನ ಮಾವ, ವಿಷ್ಣುವರ್ಧನ, ರಾಯರು ಬಂದರು ಮಾವನ ಮನೆಗೆ, ಆಟಗಾರ,ಮನೆ ಮನೆ ಕಥೆ. ಆಫ್ರಿಕಾದಲ್ಲಿ ಶೀಲಾ, ಚೌಕ, ಪ್ರೀತಿ ಮಾಡು ತಮಾಷೆ ನೋಡು, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.
1966ರಲ್ಲಿ ದ್ವಾರಕೀಶ್ ಅವರು ತುಂಗಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಮತೆಯ ಬಂಧನ ಚಲನಚಿತ್ರವನ್ನು ಸಹ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿ ಬಡ್ತಿಪಡೆದರು. 1969ರಲ್ಲಿ ಡಾ.ರಾಜ್ ಕುಮಾರ್ ಮತ್ತು ಭಾರತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಮೇಯರ್ ಮುತ್ತಣ್ಣ ಸಿನಿಮಾ ದ್ವಾರಕೀಶ್ ಸ್ವತಂತ್ರವಾಗಿ ನಿರ್ಮಿಸಿದ ಮೊದಲ ಸಿನಿಮಾ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು.
ಮೇಯರ್ ಮುತ್ತಣ್ಣನ ನಂತರ, ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಎರಡು ದಶಕಗಳ ಕಾಲ ಒಂದರ ಹಿಂದೆ ಒಂದರಂತೆ ಬಾಕ್ಸ್ ಆಫೀಸ್ ಯಶಸ್ಸನ್ನು ನೀಡಿದರು.
1985ರಿಂದ ದ್ವಾರಕೀಶ್ ಅವರು ಚಲನಚಿತ್ರಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು. ನಿರ್ದೇಶಕರಾಗಿ ಅವರ ಮೊದಲ ಚಿತ್ರ ವಿಷ್ಣುವರ್ಧನ್ ನಟನೆಯ ನೀ ಬರೆದ ಕಾದಂಬರಿ ಸಿನಿಮಾ. ನಿರ್ದೇಶಕರಾಗಿ ಡ್ಯಾನ್ಸ್ ರಾಜ ಡ್ಯಾನ್ಸ್, ಶ್ರುತಿ. ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಮತ್ತು ಕಿಲಾಡಿಗಳು ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
– ಕಾವ್ಯಶ್ರೀ ಕಲ್ಮನೆ