ಚಳಿಗಾಲಲ್ಲಿ ಏನಾದರೂ ಬಿಸಿ-ಬಿಸಿಯಾಗಿ ಚಾಟ್ಪಟಾವಾಗಿರೋದು ತಿನ್ನಬೇಕು ಅನ್ನಿಸದೋ ಸಹಜ. ಇಂತಹ ಸಮಯದಲ್ಲಿ, ಬಾಯಿಗೆ ರುಚಿ ನೀಡುವ ಮತ್ತು ಆರೋಗ್ಯಕ್ಕೆ ಹಿತ ನೀಡುವ ಒಂದು ಅದ್ಭುತ ಖಾದ್ಯವೆಂದರೆ ಅದುವೇ ರಸಂ!
ಸಾಮಾನ್ಯ ರಸಂ ಸೇವಿಸುವುದಕ್ಕಿಂತ, ಈ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು, ಶೀತ-ನೆಗಡಿಯಿಂದ ಬಚಾವಾಗಲು ಚಿಕನ್ ಪೆಪ್ಪರ್ ರಸಂ ಅನ್ನು ಒಮ್ಮೆ ಪ್ರಯತ್ನಿಸಿ.
ಬನ್ನಿ, ಬಾಯಿಗೆ ರುಚಿ ಮತ್ತು ದೇಹಕ್ಕೆ ಹಿತವಾಗುವ ಚಿಕನ್ ಪೆಪ್ಪರ್ ರಸಂ ಮಾಡುವ ಸರಳ ವಿಧಾನವನ್ನು ನೋಡೋಣ.
ರಸಂ ಪುಡಿಗೆ ಬೇಕಾಗುವ ಸಾಮಗ್ರಿಗಳು
* ಮೆಣಸು (ಕಾಳು) – 1 ಚಮಚ
* ಜೀರಿಗೆ – 1 ಚಮಚ
* ಕೊತ್ತಂಬರಿ (ಕಾಳು) – 1 ಚಮಚ
* ಕರಿಬೇವಿನ ಎಲೆಗಳು – 5 ರಿಂದ 6 ಎಲೆಗಳು
ಟೊಮ್ಯಾಟೋ ಪೇಸ್ಟ್‌ಗೆ ಬೇಕಾಗುವ ಸಾಮಗ್ರಿಗಳು
* ಹಣ್ಣಾದ ಟೊಮ್ಯಾಟೊ – 3
* ಅರಿಶಿನ ಪುಡಿ – 1/2 ಚಮಚ
ರಸಂಗೆ ಬೇಕಾಗುವ ಸಾಮಗ್ರಿಗಳು
* ಚಿಕನ್ – 250 ಗ್ರಾಂ
* ಎಣ್ಣೆ – 4 ಚಮಚ
* ಜೀರಿಗೆ – 1 ಚಮಚ (ಒಗ್ಗರಣೆಗೆ)
* ಬೆಳ್ಳುಳ್ಳಿ – 7 ರಿಂದ 8 ಎಸಳು (ಜಜ್ಜಿದ್ದು)
* ಒಣ ಮೆಣಸಿನಕಾಯಿ – 1
* ಹಸಿಮೆಣಸಿನಕಾಯಿ – 2
* ಕರಿಬೇವಿನ ಎಲೆಗಳು – 2 ಕಟ್ಟು (ಒಗ್ಗರಣೆಗೆ)
* ಅರಿಶಿನ ಪುಡಿ – 1/2 ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಹುಣಸೆಹಣ್ಣಿನ ರಸ – 1/2 ಕಪ್
* ನೀರು – 3 ಕಪ್
* ಕೊತ್ತಂಬರಿ ಸೊಪ್ಪು – ಸ್ವಲ್ಪ (ಗಾರ್ನಿಶ್‌ಗೆ)
ಚಿಕನ್ ಪೆಪ್ಪರ್ ರಸಂ ಮಾಡುವ ಸರಳ ವಿಧಾನ
ಮೊದಲಿಗೆ, ಬಾಣಲೆಯನ್ನು ಬಿಸಿ ಮಾಡಿ. ಅದಕ್ಕೆ ಮೆಣಸು, ಜೀರಿಗೆ, ಕೊತ್ತಂಬರಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಪರಿಮಳ ಬರುವವರೆಗೆ ಚೆನ್ನಾಗಿ ಹುರಿಯಿರಿ. ನಂತರ ಇದನ್ನು ತಣ್ಣಗಾಗಿಸಿ, ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ಪುಡಿ ಮಾಡಿ. ಒಂದು ತಟ್ಟೆಯಲ್ಲಿ ಹಾಕಿ ಪಕ್ಕಕ್ಕಿಡಿ.
ಬಳಿಕ ಮಿಕ್ಸರ್ ಜಾರ್‌ನಲ್ಲಿ, ಟೊಮ್ಯಾಟೋಗಳನ್ನು ತುಂಡುಗಳಾಗಿ ಕತ್ತರಿಸಿ ಹಾಕಿ, ಅರಿಶಿನ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ
ಈಗ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ. ನಂತರ ಜಜ್ಜಿದ ಬೆಳ್ಳುಳ್ಳಿ ಮತ್ತು ಒಣ ಮೆಣಸಿನಕಾಯಿ ಸೇರಿಸಿ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಒಗ್ಗರಣೆಗೆ ಚಿಕನ್ ಸೇರಿಸಿ, ಅದು ಎಣ್ಣೆ ಬಿಡುವವರೆಗೂ ಚೆನ್ನಾಗಿ ಹುರಿಯಿರಿ.
ಈಗ ಅರಿಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀವು ತಯಾರಿಸಿದ ರಸಂ ಪುಡಿಯನ್ನು ಸೇರಿಸಿ 2-3 ನಿಮಿಷಗಳ ಕಾಲ ಚೆನ್ನಾಗಿ ಕಲಸಿ.
ನಂತರ ರುಬ್ಬಿದ ಟೊಮ್ಯಾಟೋ ಪೇಸ್ಟ್ ಮತ್ತು ಹುಣಸೆಹಣ್ಣಿನ ರಸವನ್ನು ಸೇರಿಸಿ. 3 ಕಪ್ ನೀರು ಹಾಕಿ ಒಮ್ಮೆ ಕಲಸಿ. ರಸಂ ಕುದಿ ಬಂದ ನಂತರ, ಮುಚ್ಚಳ ಮುಚ್ಚಿ 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚಿಕನ್ ತುಂಡುಗಳು ಸಂಪೂರ್ಣವಾಗಿ ಬೇಯುವವರೆಗೆ ಬಿಡಿ. 10 ನಿಮಿಷಗಳ ನಂತರ ಮುಚ್ಚಳ ತೆಗೆದು, ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ.
ಬಿಸಿ-ಬಿಸಿ ಅನ್ನದೊಂದಿಗೆ ಅಥವಾ ಹಾಗೆಯೇ ಸೂಪ್‌ನಂತೆ ಕುಡಿಯಲು ರುಚಿಕರವಾದ ಚಿಕನ್ ಪೆಪ್ಪರ್ ರಸಂ ಸಿದ್ಧ
