ಬೆಂಗಳೂರು: ರಾಜ್ಯದಲ್ಲಿ ಕಳೆದ ಐದೂವರೆ ವರ್ಷಗಳಲ್ಲಿ 82 ಹುಲಿಗಳು ಮೃತಪಟ್ಟಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಈ ಎಲ್ಲಾ ಹುಲಿಗಳ ಸಾವಿನ ಬಗ್ಗೆ ವರದಿ ಸಲ್ಲಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಸಚಿವರು, ಸಾವನ್ನಪ್ಪಿರುವ 82 ಹುಲಿಗಳ ಪೈಕಿ ಎಷ್ಟು ಹುಲಿಗಳು ಸಹಜವಾಗಿ ಸಾವನ್ನಪ್ಪಿವೆ? ಎಷ್ಟು ಹುಲಿಗಳು ಅಸಹಜವಾಗಿ ಮೃತಪಟ್ಟಿವೆ? ಅಸಹಜವಾಗಿ ಮೃತಪಟ್ಟ ಹುಲಿಗಳ ಸಾವಿಗೆ ಕಾರಣವೇನು? ಎಂಬ ಬಗ್ಗೆ ತನಿಖೆ ನಡೆದು ವರದಿ ಬಂದಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಮೃತಪಟ್ಟ ಯಾವುದಾದರೂ ಹುಲಿಗಳ ಅಂಗಾಂಗ ಅಂದರೆ ಉಗುರು, ಹಲ್ಲು ಇತ್ಯಾದಿ ತೆಗೆಯಲಾಗಿತ್ತೆ? ಹುಲಿಗಳ ಹತ್ಯೆ ಆಗಿದ್ದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ಆಗಿದೆಯೇ? ಎಷ್ಟು ಹುಲಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ? ಎಂಬ ವಿವರವನ್ನೂ ಕೇಳಿದ್ದಾರೆ.

ಮಲೆ ಮಹದೇಶ್ವರ ಕಾನನ ಪ್ರದೇಶದ ಹೂಗ್ಯಂನಲ್ಲಿ 5 ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟಿವೆ ಎನ್ನಲಾದ ಪ್ರಕರಣಕ್ಕೆ ಕೆಲವು ದಿನಗಳ ಮೊದಲು ಕೌದಳ್ಳಿ ವಲಯ, ರಾಮಾಪುರ-ಮಾರ್ಟಳ್ಳಿ ಗಡಿಯಲ್ಲಿ ಚಿರತೆಯೊಂದರ ಹತ್ಯೆ ಆಗಿತ್ತು ಮತ್ತು ಮೃತ ಚಿರತೆಯ ಕಾಲುಗಳನ್ನು ಕತ್ತರಿಸಲಾಗಿತ್ತು ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿ ಕುರಿತಂತೆಯೂ ಎಪಿಸಿಸಿಎಫ್ ನೇತೃತ್ವದ ತಂಡದಿಂದ ತನಿಖೆಗೆ ಆದೇಶಿಸಿದ್ದಾರೆ.