ಹಾಸನ: ರಾಜ್ಯದ ಪ್ರಸಿದ್ಧ ಹಾಸನಾಂಬೆ ದೇವಿಯ ದರ್ಶನೋತ್ಸವ ಅಂತಿಮ ಘಟ್ಟ ತಲುಪಿದ್ದು, ಅಮ್ಮನ ದರ್ಶನಕ್ಕೆ ಇಂದು(ಅಕ್ಟೋಬರ್ 22) ಕೊನೆ ದಿನವಾಗಿದ್ದು ಹಿಂದೆಂದೂ ಕಾಣದಷ್ಟು ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ದೇವಿ ದರ್ಶನ ಆರಂಭವಾಗಿದ್ದು, ಸರತಿ ಸಾಲುಗಳಲ್ಲಿ ನಿಂತು ಸಹಸ್ರಾರು ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ.
ಅಕ್ಟೋಬರ್ 10 ರಿಂದ ಹಾಸನಾಂಬೆ ದೇವಿ ದರ್ಶನ ಪ್ರಾರಂಭವಾದಾಗಿನಿಂದ ಅಕ್ಟೋಬರ್ 20ರವರೆಗೆ ಒಟ್ಟು 24 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದುಕೊಂಡಿದ್ದಾರೆ. ಇಂದು ರಾತ್ರಿ 7ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಗರ್ಭಗುಡಿಯ ಬಾಗಿಲು ಬಂದ್ ಆಗಿರಲಿದೆ. ರಾತ್ರಿ 7 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದೇವಿ ದರ್ಶನ ಇರುವುದಿಲ್ಲ. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ದರ್ಶನವಿರಲಿದೆ. ನಾಳೆ ಶಾಸ್ತ್ರೋಕ್ತವಾಗಿ ಹಾಸನಾಂಬ ದೇವಿ ಗರ್ಭಗುಡಿ ಬಾಗಿಲು ಮುಚ್ಚಲಿದೆ.
