ಚಿಕ್ಕಮಗಳೂರು; ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾದ ಪತ್ನಿಯ ಶವ ಹಾಗೂ ಪುಟ್ಟ ಕಂದಮ್ಮನನ್ನು ಆಸ್ಪತ್ರೆಯಲ್ಲೇ ಬಿಟ್ಟು ಪತಿ ಹಾಗೂ ಆತನ ಮನೆಯವರು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಶಂಕರಳ್ಳಿ ಈಶ್ವರಪ್ಪ ಎಂಬುವವರ ಪುತ್ರಿ ಪೂಜಾ(30) ಅವರನ್ನು ಕಳೆದ ಮೂರು ವರ್ಷಗಳ ಹಿಂದೆ ಎನ್.ಆರ್.ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಎರಡೂವರೆ ವರ್ಷದ ಗಂಡು ಮಗುವಿದೆ.
ಶರತ್ ತಂದೆ,ತಾಯಿ ಹಾಗೂ ಶರತ್ ನ ಸಹೋದರಿ ಸೇರಿ ಪೂಜಾಳಿಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಕಿರುಕುಳಕ್ಕೆ ಬೇಸತ್ತ ಪೂಜಾ ತಾಯಿ ಮನೆಗೆ ಬಂದು ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದಳು. ತವರು ಮನೆಯವರ ಸಮಾಧಾನದ ಮಾತು ಹೇಳಿ ಕಳುಹಿಸಿಕೊಟ್ಟಿದ್ದರು. ಪದೇ ಪದೇ ಕಿರುಕುಳ ಹೆಚ್ಚಾಗಿದರಿಂದ ಪೂಜ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಿಸದೇ ಪೂಜಾ ಸಾವನ್ನಪ್ಪಿದ್ದಾರೆ. ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪತಿ ಶರತ್ ಹಾಗೂ ಆತನ ತಂದೆ ತಾಯಿ, ಪೂಜಾಳ ಶವ ಹಾಗೂ ಪುಟ್ಟ ಕಂದಮ್ಮನನ್ನು ಬಿಟ್ಟು ಪರಾರಿಯಾಗಿದ್ದಾರೆ. ಚಿಕ್ಕಮಗಳೂರಿನ ಎನ್ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
