ಚಳಿಗಾಲದ ಈ ಸಮಯದಲ್ಲಿ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಬಿಡುವಿಲ್ಲದ ಸಮಯ, ಕಳಪೆ ಆಹಾರ ಪದ್ಧತಿ ಮತ್ತು ಹೆಚ್ಚುತ್ತಿರುವ ಮಾಲಿನ್ಯ ನಮ್ಮ ಆರೋಗ್ಯದ ಜೊತೆಗೆ ನಮ್ಮ ತ್ವಚೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಗಂತ ಸಲೂನ್‌ಗಳಿಗೆ ಹೋಗಿ ದುಬಾರಿ ಚಿಕಿತ್ಸೆಗಳನ್ನು ಪಡೆಯುವ ಬದಲು ಈ ಟಿಪ್ಸ್‌ಗಳನ್ನ ಪಾಲಿಸಿದರೆ ಸಾಕು, ತ್ವಚೆಯನ್ನು ತೇವಭರಿತವಾಗಿ (Hydrated) ಮತ್ತು ಆರೋಗ್ಯಕರವಾಗಿ ಇಡಲು ಸಾಧ್ಯ.
ನೆನಪಿಡಿ, ನಮ್ಮ ದೇಹವನ್ನು ಒಳಗಿನಿಂದ ನೀರಿನಂಶದಿಂದ ಸಮೃದ್ಧವಾಗಿಟ್ಟರೆ, ಆ ಹೊಳಪು ಹೊರಗೆ ತ್ವಚೆಯಲ್ಲಿ ಮೂಡಿಬರುತ್ತದೆ. ಇದಕ್ಕಾಗಿ, ತ್ವಚೆಯ ಹೊರಗಿನ ಲೇಪನಗಳಷ್ಟೇ ಮುಖ್ಯವಲ್ಲ, ನಾವು ದೇಹದೊಳಗಿನ ಪೋಷಣೆ ಮತ್ತು ಸರಿಯಾದ ಜೀವನಶೈಲಿಯನ್ನು ಅನುಸರಿಸುವುದು ಸಹ ಅತ್ಯಗತ್ಯ.
ನೈಸರ್ಗಿಕ ಹೊಳಪಿಗಾಗಿ ಸರಳ ಸೂತ್ರಗಳು:
1. ಸಮರ್ಪಕವಾಗಿ ನೀರು ಮತ್ತು ಆಹಾರ ಪೂರೈಕೆ
ನಮ್ಮ ದೇಹದಲ್ಲಿ ತೇವಾಂಶವನ್ನು ಕಾಪಾಡಲು ದಿನಕ್ಕೆ ಕನಿಷ್ಠ 3 ರಿಂದ 4 ಲೀಟರ್ ಶುದ್ಧ ನೀರನ್ನು ಕುಡಿಯಲೇಬೇಕು. ನೀರಿಲ್ಲದೆ ಚರ್ಮವು ಒಣಗುತ್ತದೆ ಮತ್ತು ಕಾಂತಿ ಕುಂದುತ್ತದೆ. ನಿಮ್ಮ ನಿತ್ಯದ ಊಟದಲ್ಲಿ ರಸಭರಿತ ಹಣ್ಣುಗಳು ಮತ್ತು ಸೊಪ್ಪು-ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ, ಎಳೆನೀರಿನಂತಹ ಆಹಾರಗಳು ದೇಹಕ್ಕೆ ಮತ್ತು ತ್ವಚೆಗೆ ಆಳದಿಂದ ಪೋಷಣೆ ಮತ್ತು ತೇವಾಂಶವನ್ನು ಒದಗಿಸುತ್ತವೆ.
2. ಬಿಸಿ ನೀರಿನ ಸ್ನಾನದಿಂದ ದೂರವಿರಿ
ಸ್ನಾನಕ್ಕೆ ತಣ್ಣೀರು ಅಥವಾ ಮಿತವಾದ ಉಗುರು ಬೆಚ್ಚಗಿನ ನೀರನ್ನು ಬಳಸಿ. ಅತಿಯಾದ ಬಿಸಿ ನೀರು ಚರ್ಮದ ಮೇಲಿನ ನೈಸರ್ಗಿಕ ಜಿಡ್ಡಿನಂಶವನ್ನು (Natural Oils) ತೊಳೆದು ಹಾಕಿ ತ್ವಚೆಯನ್ನು ಒಣಗಿಸುತ್ತದೆ. ಸ್ನಾನದ ನಂತರ ತಕ್ಷಣ ಮೊಯಿಶ್ಚರೈಸರ್ ಹಚ್ಚುವುದನ್ನು ಮರೆಯಬೇಡಿ. ತ್ವಚೆಯ ಮೇಲೆ ಉಳಿದಿಕೊಂಡಿರು ಸತ್ತ ಚರ್ಮದ ಪದರಗಳನ್ನು ಹೋಗಿಸಲು ಮೃದುವಾಗಿ ಸ್ಕ್ರಬ್ ಮಾಡಿಕೊಳ್ಳಿ. ಇದಕ್ಕಾಗಿ ಅಕ್ಕಿ ಹಿಟ್ಟು, ಕಡಲೆ ಹಿಟ್ಟಿನ್ನು ಬಳಸಿ. ವಾರಕ್ಕೊಮ್ಮೆ ಸ್ಕ್ರಬ್ ಮಾಡುವುದರಿಂದ ಡೆಡ್ ಸ್ಕಿನ್ ಹೋಗಿ, ಚರ್ಮ ಮೃದುವಾಗುತ್ತದೆ.
3. ಸೂರ್ಯನ ತಾಪದಿಂದ ರಕ್ಷಣೆ
ಸೂರ್ಯನ ಹಾನಿಕಾರಕ ಯುವಿ ಕಿರಣಗಳು (UV Rays) ತ್ವಚೆ ಬೇಗನೆ ವಯಸ್ಸಾಗುವಂತೆ ಮಾಡುತ್ತವೆ. ಆದ್ದರಿಂದ, ಮನೆಯಿಂದ ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ತಪ್ಪದೇ ಹಚ್ಚಿಕೊಳ್ಳಿ.
4. ಚೆನ್ನಾಗಿ ನಿದ್ದೆ ಮಾಡಿ
ನಿಮ್ಮ ತ್ವಚೆ ಫ್ರೆಶ್ ಆಗಿರಲು ಪ್ರತಿದಿನ ಕನಿಷ್ಠ 7 ರಿಂದ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿ. ನಿದ್ರೆಯ ಕೊರತೆಯು ಮುಖದ ಕಳೆಯನ್ನು ಹಾಳುಮಾಡುತ್ತದೆ. ದೈಹಿಕ ಮತ್ತು ಮಾನಸಿಕ ಒತ್ತಡ ತ್ವಚೆಯ ಆರೋಗ್ಯವನ್ನು ಕುಗ್ಗಿಸುತ್ತದೆ. ಯೋಗ, ಧ್ಯಾನ ಅಥವಾ ನಿಮಗಿಷ್ಟವಾದ ಚಟುವಟಿಕೆಗಳ ಮೂಲಕ ಮನಸ್ಸನ್ನು ಹಗುರ ಮಾಡಿಕೊಳ್ಳಿ.
5. ಮನೆಯಲೇ ಲೇಪನಗಳನ್ನು ತಯಾರಿಸಿ ಬಳಸಿ
ಮನೆಯಲ್ಲಿ ಸುಲಭವಾಗಿ ಅಲೋವೆರಾ , ಮೊಸರು, ಮತ್ತು ಜೇನುತುಪ್ಪ ಬಳಸಿ ಮಾಸ್ಕ್ ತಯಾರಿಸಿ ವಾರಕ್ಕೊಮ್ಮೆ ಹಚ್ಚಿಕೊಳ್ಳಿ. ಇವು ತ್ವಚೆಗೆ ತಕ್ಷಣವೇ ತೇವಾಂಶವನ್ನು ನೀಡಿ ಕಾಂತಿ ಹೆಚ್ಚಿಸುತ್ತವೆ. ಮುಖಕ್ಕೆ ರಾತ್ರಿ ಮಲಗುವ ಮುನ್ನ ಶುದ್ಧ ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ ಅಥವಾ ಶಿಯಾ ಬೆಣ್ಣೆಯಂತಹ ನೈಸರ್ಗಿಕ ಮೊಯಿಶ್ಚರೈಸರ್‌ಗಳನ್ನು ಲೇಪಿಸಿ ಮಸಾಜ್ ಮಾಡಿ.
6. ರಾತ್ರಿ ಮಲಗುವ ಮುನ್ನ ಸ್ವಚ್ಛತೆ ಮುಖ್ಯ
ದಿನವಿಡೀ ಮುಖದ ಮೇಲೆ ಸಂಗ್ರಹವಾದ ಕೊಳೆ ಮತ್ತು ಧೂಳನ್ನು ಸ್ವಚ್ಛಗೊಳಿಸದೆ ಮಲಗಬೇಡಿ. ಮಲಗುವ ಮುನ್ನ ಕ್ಲೆನ್ಸರ್‌ನಿಂದ ಮುಖ ತೊಳೆದು, ನಂತರ ರೋಸ್ ವಾಟರ್ (Rose Water) ಹಚ್ಚಿಕೊಳ್ಳಿ. ಇದು ಚರ್ಮದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಿ, ರಾತ್ರಿ ಹೊತ್ತು ತ್ವಚೆ ಪುನರುಜ್ಜೀವನಗೊಳ್ಳಲು (Rejuvenate) ಸಹಾಯ ಮಾಡುತ್ತದೆ.
7. ಆಂಟಿಆಕ್ಸಿಡೆಂಟ್ ಆಹಾರದ ಬಳಕೆ
ತ್ವಚೆಯನ್ನು ಮಾಲಿನ್ಯದ ಹಾನಿಯಿಂದ ರಕ್ಷಿಸಲು ಆಂಟಿಆಕ್ಸಿಡೆಂಟ್ ಭರಿತ ಆಹಾರಗಳನ್ನು ಸೇವಿಸಿ. ನೆಲ್ಲಿಕಾಯಿ, ಬೆರ್ರಿ ಹಣ್ಣುಗಳು, ವಾಲ್‌ನಟ್ಸ್ ಮತ್ತು ಹಸಿರು ಚಹಾದಂತಹ ಆಹಾರಗಳು ತ್ವಚೆಯ ಮಂದತ್ವವನ್ನು ಹೋಗಲಾಡಿಸಿ, ಒಳಗಿನಿಂದಲೇ ಆರೋಗ್ಯ ಮತ್ತು ಕಾಂತಿಯನ್ನು ನೀಡುತ್ತವೆ.
8. ಹೈಲುರಾನಿಕ್ ಆಸಿಡ್ ಬಳಸಿ
ನಿಮ್ಮ ಚರ್ಮದ ಆರೈಕೆ ಉತ್ಪನ್ನಗಳಲ್ಲಿ ಹೈಲುರಾನಿಕ್ ಆಸಿಡ್ ಹೊಂದಿರುವ ಸೀರಮ್‌ಗಳನ್ನು ಬಳಸುವುದರಿಂದ ತ್ವಚೆಯ ನೀರಿನಂಶ ಹೆಚ್ಚುತ್ತದೆ. ಇದರ ಜೊತೆಗೆ, ನಿಮ್ಮ ಬೆರಳ ತುದಿಗಳಿಂದ ಪ್ರತಿದಿನ ಮುಖಕ್ಕೆ ಮೃದುವಾಗಿ ಮಸಾಜ್ (Face Massage) ನೀಡುವುದರಿಂದ ಮುಖದ ರಕ್ತ ಸಂಚಾರವು ಉತ್ತಮಗೊಂಡು ನೈಸರ್ಗಿಕವಾದ ಕೆಂಪು-ಹೊಳಪು ಮೂಡುತ್ತದೆ.
ಒಟ್ಟಿನಲ್ಲಿ, ಹೊಳೆಯುವ ಮತ್ತು ಆರೋಗ್ಯಕರ ತ್ವಚೆಗಾಗಿ ಸರಿಯಾದ ಚರ್ಮದ ಆರೈಕೆ ದಿನಚರಿ (skincare routine) ಮತ್ತು ಹೈಡ್ರೇಶನ್ ಬಹಳ ಮುಖ್ಯ. ಆರೋಗ್ಯಕರ ತ್ವಚೆಯು ಕೇವಲ ಬಾಹ್ಯ ಆರೈಕೆಯಿಂದಲ್ಲ, ಬದಲಿಗೆ ಆಂತರಿಕ ಪೋಷಣೆಯಿಂದಲೂ ಲಭಿಸುತ್ತದೆ ಎಂಬುದನ್ನು ನೆನಪಿಡಿ. ಆದ್ದರಿಂದ, ನಿಮ್ಮ ಆಹಾರ ಮತ್ತು ಚರ್ಮದ ಆರೈಕೆ ದಿನಚರಿಯ ಬಗ್ಗೆ ವಿಶೇಷ ಗಮನ ಕೊಡಿ.
