ಚಿಕ್ಕಮಗಳೂರು: ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರನ್ನು ಬಲಿ ಪಡೆದಿದ್ದ ಕಾಡಾನೆ ಶೌರ್ಯ (32) ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಮೃತಪಟ್ಟಿದೆ.
ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರ ಭಾಗದಲ್ಲಿರುವ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಮೊದಲು ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಇದಾದ ಒಂದೇ ವಾರದಲ್ಲಿ ಅದೇ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಅವರ ಮೇಲೂ ಕಾಡಾನೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು.
2026ರ ಫೆಬ್ರವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ನಡೆದ ಕಾಡಾನೆ ದಾಳಿಗಳ ಬಳಿಕ ಶೌರ್ಯ ಆನೆಯನ್ನು ಸೆರೆಹಿಡಿಯಲಾಗಿತ್ತು. ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಪಳಗಿಸಲಾಗಿತ್ತು. ಸೆರೆ ಕಾರ್ಯಾಚರಣೆ ಹಾಗೂ ತರಬೇತಿ ವೇಳೆ ಆನೆ ಗಾಯಗೊಂಡಿತ್ತು ಎಂದು ತಿಳಿದು ಬಂದಿದೆ.
ತರಬೇತಿ ವೇಳೆ ಆನೆಯ ಕಾಲು ಹಾಗೂ ದೇಹದ ಬೇರೆ ಬೇರೆ ಭಾಗಗಳಲ್ಲಿ ಗಾಯವಾಗಿತ್ತು. ಸೆರೆ ಹಿಡಿಯುವ ವೇಳೆ ತೊಡೆಯ ಒಳಭಾಗದಲ್ಲಿ ಗಾಯವಾಗಿತ್ತು. ಇದನ್ನು ಗಮನಿಸದ ಪರಿಣಾಮ ಒಳಭಾಗದಲ್ಲಿ ಗಾಯ ತೀವ್ರ ಉಲ್ಬಣಗೊಂಡಿತ್ತು. ಸೆ.30ರ ಸಂಜೆ ಆನೆ ಬಿಡಾರದಲ್ಲಿ ಕುಸಿದು ಬಿದ್ದಿತ್ತು. ಈ ವೇಳೆ ತಕ್ಷಣ ಆನೆಗೆ ಚಿಕಿತ್ಸೆ ನೀಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಇಂದು (ಅ.1) ಬೆಳಗ್ಗೆ ಆನೆ ಸಾವನ್ನಪ್ಪಿದೆ.
