ಹಾಸನ: ಬೇಲೂರು ತಾಲೂಕಿನ, ನಾಗೇನಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿಯಾಗಿದೆ. ಹಫೀಜುರ್ ರೆಹಮಾನ್ (57) ಕಾಡಾನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ. 3 ದಿನಗಳ ಅಂತರದಲ್ಲಿ ಕಾಡಾನೆ ದಾಳಿಗೆ ಎರಡನೇ ಬಲಿಯಾಗಿದೆ. ಸದ್ಯ ಹಫೀಜುರ್ ರೆಹಮಾನ್ ಮೃತದೇಹವನ್ನು ಬೇಲೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಶನಿವಾರ ಕಾಡಾನೆ ದಾಳಿಯಿಂದ ಚೌಡನಹಳ್ಳಿ ಗ್ರಾಮದ ಜಯಮ್ಮ ಮೃತಪಟ್ಟಿದ್ದರು. ಭಾನುವಾರ ಮಧ್ಯಾಹ್ನದವರೆಗೂ ಜಯಮ್ಮ ಮೃತದೇಹವಿಟ್ಟು ಗ್ರಾಮಸ್ಥರು, ರೈತ ಸಂಘ ಹಾಗೂ ಕಾಫಿ ಬೆಳೆಗಾರರು ಪ್ರತಿಭಟನೆ ನಡೆಸಿದ್ದರು. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದರು. ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಬೇಲೂರು ಭಾಗದಲ್ಲಿರುವ ಎಲ್ಲಾ ಕಾಡಾನೆಗಳನ್ನು ಭದ್ರ ಅರಣ್ಯಕ್ಕೆ ಓಡಿಸುವುದಾಗಿ ಘೋಷಣೆ ಮಾಡಿ ಸಿಸಿಎಫ್ ಏಡುಕುಂಡಲ ಆದೇಶ ಮಾಡಿದ್ದರು.
ಇಂದು ಬೇಲೂರು ಭಾಗಕ್ಕೆ ಕುಮ್ಕಿ ಆನೆಗಳು ಆಗಮಿಸಲಿವೆ. ಮಂಗಳವಾರದಿಂದ ಕಾರ್ಯಾಚರಣೆ ಆರಂಭವಾಗಬೇಕಿತ್ತು. ಕಾಡಾನೆ ದಾಳಿಗೆ ಜಯಮ್ಮ ಸಾವಿನ ಬೆನ್ನಲ್ಲೇ ಇಂದು ಕಾಡಾನೆ ದಾಳಿಗೆ ಮತ್ತೋರ್ವ ಬಲಿಯಾಗಿದ್ದಾರೆ. ಈ ಹಿನ್ನೆಲೆ ತಾಲೂಕು ಆಸ್ಪತ್ರೆ ಎದುರು ನೂರಾರು ಜನರು ಜಮಾಯಿಸಿದ್ದು, ಆಸ್ಪತ್ರೆಯೊಳಗೆ ಅಂಬುಲೆನ್ಸ್ ಹೋಗದಂತೆ ಅಡ್ಡಗಟ್ಟಿದ್ದಾರೆ.
ಇನ್ನು ಪ್ರಕರಣ ಸಂಬಂಧ ಬೇಲೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ರಸ್ತೆ ತಡೆದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಗೇನಹಳ್ಳಿ ಗ್ರಾಮದಲ್ಲೂ ಪ್ರತಿಭಟನೆ ಜೋರಾಗಿದೆ. ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುತ್ತಿದೆ.
