Friday, March 27, 2026
Homeಜಿಲ್ಲಾಸುದ್ದಿರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ಕಿರುಕುಳ: ಮೆಸ್ಕಾಂ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ಕಿರುಕುಳ: ಮೆಸ್ಕಾಂ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮೂಡಿಗೆರೆ: ರೈತರ ಪಂಪ್‌ಸೆಟ್ ಬಿಲ್ ಪಾವತಿ ವಿಚಾರವಾಗಿ ಮನಬಂದಂತೆ ಬಿಲ್ ನೀಡುತ್ತಿರುವ ಮೆಸ್ಕಾಂ ಇಲಾಖೆಯ ದೌರ್ಜನ್ಯ ಖಂಡಿಸಿ ಮೆಸ್ಕಾಂ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.

ಈ ಹಿಂದಿನ ಸರ್ಕಾರ 10 ಹೆಚ್.ಪಿ ವರೆಗೆ ಕೃಷಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಉಚಿತ ಎಂದು ಆದೇಶ ಹೊರಡಿಸಿತ್ತು. ಇದರಿಂದ ರೈತರು ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿರಲಿಲ್ಲ. ಆದರೆ, ಈಗಿನ ಸರ್ಕಾರದ ಮೌಖಿಕ ಆದೇಶ ಇದೆ ಎಂದು ಹೇಳುತ್ತಿರುವ ಅಧಿಕಾರಿಗಳು, ವಿದ್ಯುತ್ ಬಿಲ್ ಕಟ್ಟಬೇಕೆಂದು ನೋಟಿಸ್ ನೀಡುತ್ತಿದ್ದಾರೆ. ಬಿಲ್ ಕಟ್ಟದಿದ್ದರೆ ಪಂಪ್‌ಸೆಟ್ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಮೆಸ್ಕಾಂ ಅಧಿಕಾರಿಗಳು ರೈತರಿಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಈ ಕ್ರಮದ ವಿರುದ್ಧ ಕಳೆದ ವರ್ಷವೂ ಮೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಬಿಲ್ ವಸೂಲಿ ಮತ್ತು ವಿದ್ಯುತ್ ಕಡಿತ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಈ ವರ್ಷ ಮತ್ತೆ ನೋಟಿಸ್ ನೀಡಿ ಕ್ರಮಕ್ಕೆ ಮುಂದಾಗಿರುವುದು ರೈತರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.

ಇದಕ್ಕೆ ವಿರೋಧವಾಗಿ ಇಂದು ಸುಮಾರು 50ಕ್ಕೂ ಹೆಚ್ಚು ರೈತರು ಮೆಸ್ಕಾಂ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದರು. “ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಹಾಗೂ ಹಿಂದಿನ ಸರ್ಕಾರದ ಆದೇಶವನ್ನು ಸಮಗ್ರವಾಗಿ ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.

ವಿನಾಕಾರಣ ನೋಟಿಸ್ ನೀಡಿ ರೈತರ ಮೇಲೆ ದಬ್ಬಾಳಿಕೆ ಮುಂದುವರಿಸಿದರೆ, ತಾಲೂಕಿನ 5 ರಿಂದ 10 ಹೆಚ್.ಪಿ ಪಂಪ್‌ಸೆಟ್ ಹೊಂದಿರುವ ಎಲ್ಲಾ ರೈತರು ಸೇರಿ ಮೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಕೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!