ಚಿಕ್ಕಮಗಳೂರು: 2026ರ ಹೊಸ ವರ್ಷದ ಆಚರಣೆಗೆ ಕಾಫಿನಾಡಿನ ರೆಸಾರ್ಟ್ ಹಾಗೂ ಹೋಂ ಸ್ಟೇಗಳು ನವ ವಧುವಿನಂತೆ ಸಿಂಗಾರಗೊಂಡಿವೆ. ಅದರೆ, ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಎತ್ತಿನಭುಜ, ದೇವರಮನೆಗುಡ್ಡ ಹಾಗೂ ಜಲಪಾತಗಳು ಸೇರಿದಂತೆ 22 ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿದೆ.

ಇದೇ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ 22 ಪ್ರವಾಸಿ ತಾಣಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆಯವರ ಮನವಿ ಮೇರೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿ ಆದೇಶಿಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಹಿನ್ನೆಲೆ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಈ ಆದೇಶದನ್ವಯ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಮಾಣಿಕ್ಯಧಾರಾ, ಝರಿ ಫಾಲ್ಸ್, ಹೊನ್ನಮ್ಮನಹಳ್ಳ, ಗಾಳಿಕೆರೆ, ಹಿರೇಕೊಳಲೆ ಕೆರೆ, ಡೈಮಂಡ್ ಫಾಲ್ಸ್, ಎತ್ತಿನಭುಜ, ದೇವರಮನೆ, ರಾಣಿಝರಿ, ಬಳ್ಳಾಳರಾಯನ ದುರ್ಗ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿ, ಬಂಡಾಜೆ ಫಾಲ್ಸ್, ಕೂಡಿಗೆ ಫಾಲ್ಸ್, ಕ್ಯಾತನಮಕ್ಕಿ, ರುದ್ರಪಾದ, ತೂಗು ಸೇತುವೆ, ಅಬ್ಬುಗುಡಿಗೆ ಫಾಲ್ಸ್, ಅಯ್ಯನಕೆರೆ, ಮದಗದಕೆರೆ ಹಾಗೂ ಹೆಬ್ಬೆ ಜಲಪಾತಕ್ಕೂ ಪ್ರವಾಸಿಗರನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನಂದಿಗಿರಿಧಾಮಕ್ಕಿಲ್ಲ ಪ್ರವೇಶ
ಹೊಸ ವರ್ಷಾಚರಣೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವಪ್ರಸಿದ್ಧ ಪ್ರವಾಸಿತಾಣ ನಂದಿಗಿರಿಧಾಮಕ್ಕೆ ಡಿ.31ರ ಮಧ್ಯಾಹ್ನ 2ರಿಂದ ಜ.1ರ ಬೆಳಿಗ್ಗೆ 10 ಗಂಟೆಯವರೆಗೆ ಬಂದ್ ಆಗಿರಲಿದೆ. ಅತಿಥಿಗೃಹ ಬುಕ್ ಮಾಡಿದವರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಿಷೇಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರರಿಂದ ಆದೇಶ ಮಾಡಿದ್ದಾರೆ. ಕುಡಿದು ಪ್ರವಾಸಿಗರ ಮೋಜು ಮಸ್ತಿ ಮಾಡೋದನ್ನು ತಡೆಯುವ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿರೋದಾಗಿ ಅವರು ತಿಳಿಸಿದ್ದಾರೆ.
