ಹಾಸನ: ಹೆತ್ತ ತಾಯಿಗೆ ಚಿಕಿತ್ಸೆ ಕೊಡಿಸುವ ವಿಚಾರದಲ್ಲಿ ಅಕ್ಕ ಮತ್ತು ತಮ್ಮನ ಕುಟುಂಬಗಳ ನಡುವೆ ಸಾರ್ವಜನಿಕವಾಗಿ ಮಾರಾಮಾರಿ ನಡೆದ ಘಟನೆ ಹಾಸನ ನಗರದ ಆರ್.ಸಿ. ರಸ್ತೆಯ ಖಾಸಗಿ ಆಸ್ಪತ್ರೆಯ ಮುಂಭಾಗ ನಡೆದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಗಳು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವಿಷಯ ತಿಳಿದು ತಾಯಿಯನ್ನು ನೋಡಲು ಬಂದ ಸಹೋದರ ಹಾಗೂ ಅಕ್ಕನ ಕುಟುಂಬದ ನಡುವೆ ಮಾತಿನ ಚಕಮಕಿ ಆರಂಭವಾಗಿದೆ.

ಮಾತು ಬೆಳೆದು ವಿಕೋಪಕ್ಕೆ ತಿರುಗುತ್ತಿದ್ದಂತೆ, ಎರಡೂ ಕುಟುಂಬಗಳ ಸದಸ್ಯರು ಆಸ್ಪತ್ರೆಯ ಆವರಣದಲ್ಲೇ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಮಹಿಳೆಯರು ಪರಸ್ಪರ ಜಡೆ ಹಿಡಿದು ಎಳೆದಾಡಿಕೊಂಡಿದ್ದು, ಕೈಗೆ ಸಿಕ್ಕ ವಸ್ತುಗಳಿಂದ ಹೊಡೆದಾಡಿಕೊಂಡಿದ್ದಾರೆ. ಆಸ್ಪತ್ರೆಗೆ ಬಂದಿದ್ದ ಇತರ ರೋಗಿಗಳು ಹಾಗೂ ಸಾರ್ವಜನಿಕರು ಈ ದೃಶ್ಯವನ್ನು ಕಂಡು ಆತಂಕಕ್ಕೊಳಗಾದರು.
ಗಲಾಟೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
