Monday, February 9, 2026
Homeಕ್ರೈಮ್ರಾಗಿಂಗ್ ಹಾಗೂ ಲೈಂಗಿಕ ಕಿರುಕುಳಕ್ಕೆ ಬಲಿಯಾದ ಪದವಿ ವಿದ್ಯಾರ್ಥಿನಿ

ರಾಗಿಂಗ್ ಹಾಗೂ ಲೈಂಗಿಕ ಕಿರುಕುಳಕ್ಕೆ ಬಲಿಯಾದ ಪದವಿ ವಿದ್ಯಾರ್ಥಿನಿ

ಹಿಮಾಚಲ ಪ್ರದೇಶ : ಧರ್ಮಶಾಲಾದ ಸರ್ಕಾರಿ ಪದವಿ ಕಾಲೇಜಿನ 19 ವರ್ಷದ ವಿದ್ಯಾರ್ಥಿನಿ ರಾಗಿಂಗ್ ಮತ್ತು ಲೈಂಗಿಕ ಕಿರುಕುಳಕ್ಕೆ ಬಲಿಯಾಗಿರುವುದು ಇಡೀ ಹಿಮಾಚಲ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಕಾಲೇಜಿನ ಪ್ರಾಧ್ಯಾಪಕರೊಬ್ಬರು ಮತ್ತು ಮೂವರು ಹಿರಿಯ ವಿದ್ಯಾರ್ಥಿನಿಯರ ನಿರಂತರ ಕಿರುಕುಳದಿಂದಾಗಿ ದೈಹಿಕ ಹಾಗೂ ಮಾನಸಿಕವಾಗಿ ಜರ್ಜರಿತವಾಗಿದ್ದ ಈ ವಿದ್ಯಾರ್ಥಿನಿ, ಸುಮಾರು ಮೂರು ತಿಂಗಳ ಕಾಲ ಸಾವು-ಬಿದುಕಿನೊಂದಿಗೆ ಹೋರಾಡಿ ಅಂತಿಮವಾಗಿ ಲೂಧಿಯಾನದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೃತ ವಿದ್ಯಾರ್ಥಿನಿಯ ತಂದೆ ನೀಡಿರುವ ದೂರಿನ ಪ್ರಕಾರ, ಸೆಪ್ಟೆಂಬರ್ 18, 2025 ರಂದು ಕಾಲೇಜಿನ ಆವರಣದಲ್ಲಿ ಭೀಕರ ಕೃತ್ಯ ನಡೆದಿತ್ತು. ಕಾಲೇಜಿನ ಹಿರಿಯ ವಿದ್ಯಾರ್ಥಿನಿಯರಾದ ಹರ್ಷಿತಾ, ಆಕೃತಿ ಮತ್ತು ಕೋಮಲಿಕಾ ಎಂಬುವವರು ಸೇರಿ ಸಂತ್ರಸ್ತೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ (Geography Department) ಸಹಾಯಕ ಪ್ರಾಧ್ಯಾಪಕ ಅಶೋಕ್ ಕುಮಾರ್ (Professor Ashok Kumar) ಎಂಬುವವರು ವಿದ್ಯಾರ್ಥಿನಿಯ ಜೊತೆ ಅಶ್ಲೀಲವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದರು ಎನ್ನಲಾಗಿದೆ. ಈ ಎರಡು ಘಟನೆಯಿಂದ ಮತ್ತು ಬೆದರಿಕೆಯಿಂದಾಗಿ ವಿದ್ಯಾರ್ಥಿನಿ ತೀವ್ರ ಮಾನಸಿಕ ಆಘಾತ ಮತ್ತು ಭಯಕ್ಕೆ ಒಳಗಾಗಿದ್ದಳು. 

ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ವಿದ್ಯಾರ್ಥಿನಿ 

ಹಲ್ಲೆ ಮತ್ತು ಕಿರುಕುಳದ ನಂತರ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು.  ಹಿಮಾಚಲ ಪ್ರದೇಶದ ಸುಮಾರು ಏಳು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಚೇತರಿಕೆ ಕಂಡುಬಾರದ ಕಾರಣ ಅಂತಿಮವಾಗಿ ಲೂಧಿಯಾನದ ದಯಾನಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (DMC Hospital) ವರ್ಗಾಯಿಸಲಾಗಿತ್ತು. ಸತತ ಮೂರು ತಿಂಗಳ ಕಾಲ ಸಾವಿನೊಡನೆ ಹೋರಾಡಿದ ವಿದ್ಯಾರ್ಥಿನಿ, ಡಿಸೆಂಬರ್ 26, 2025 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಮಗಳ ಸಾವಿನಿಂದ ಕಂಗಾಲಾದ ಕುಟುಂಬಸ್ಥರು ಜನವರಿ 1, 2026 ರಂದು ಪೊಲೀಸರ ಮೊರೆ ಹೋಗಿದ್ದಾರೆ.

ಸಂತ್ರಸ್ತೆಯ ತಂದೆಯ ದೂರಿನ ಆಧಾರದ ಮೇಲೆ ಧರ್ಮಶಾಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 (ಲೈಂಗಿಕ ಕಿರುಕುಳ), ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), ಮತ್ತು ಸೆಕ್ಷನ್ 3(5) (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ. ಇದರೊಂದಿಗೆ ಹಿಮಾಚಲ ಪ್ರದೇಶ ರಾಗಿಂಗ್ ನಿಷೇಧ ಕಾಯ್ದೆ 2009ರ ಸೆಕ್ಷನ್ 3ರ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ. 

ಆರಂಭದಲ್ಲಿ ಕೇವಲ ವಿದ್ಯಾರ್ಥಿನಿಯರ ವಿರುದ್ಧ ದೂರು ಇತ್ತಾದರೂ, ತನಿಖೆಯ ವೇಳೆ ಪ್ರಾಧ್ಯಾಪಕನ ಕಿರುಕುಳದ ವಿಷಯ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ಹೆಸರನ್ನು ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ.

ಈ ಘಟನೆಯು ಹಿಮಾಚಲ ಪ್ರದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಾಲೇಜಿನ ಆವರಣದಲ್ಲೇ ಇಂತಹ ಹೇಯ ಕೃತ್ಯ ನಡೆದಿದ್ದರೂ ಆಡಳಿತ ಮಂಡಳಿ ಏಕೆ ಮೌನವಾಗಿತ್ತು ಎಂಬ ಪ್ರಶ್ನೆಗಳು ಎದ್ದಿವೆ. ತನಿಖೆ ಚುರುಕುಗೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಯು ಸಾವಿಗೆ ನಿಖರವಾದ ವೈದ್ಯಕೀಯ ಕಾರಣಗಳನ್ನು ಬಹಿರಂಗಪಡಿಸಲಿದೆ ಎಂದು ಎಸ್‌ಪಿ ಅಶೋಕ್ ರತನ್ ತಿಳಿಸಿದ್ದಾರೆ. ತಪ್ಪಿತಸ್ಥ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿನಿಯರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!