ಮೂಡಿಗೆರೆ:ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗುತ್ತಿ ಗ್ರಾಮದ ಬಳಿ ನಿರ್ಮಿಸಲಾದ 4 ಕೋಟಿ ರೂ. ವೆಚ್ಚದ ರಸ್ತೆ ಒಂದೇ ವಾರದಲ್ಲಿ ಡಮಾರ್ ಕಿತ್ತು ಬಂದಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು .. ಸಬ್ಬೇನಹಳ್ಳಿ–ಗುತ್ತಿ–ಮೂಲರಹಳ್ಳಿ ಮಾರ್ಗವಾಗಿ ಪ್ರವಾಸಿ ತಾಣ ದೇವರಮನೆ ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಈ ರಸ್ತೆ ಸುಮಾರು 3 ಕಿ.ಮೀ. 800 ಮೀಟರ್ ಉದ್ದವಿದೆ. ಆದರೆ ಕಾಮಗಾರಿ ಪೂರ್ಣಗೊಂಡು ಒಂದು ವಾರ ಕಳೆಯುವ ಮುನ್ನವೇ ರಸ್ತೆಯ ಮೇಲ್ಭಾಗದ ಜಲ್ಲಿ ಪುಡಿ ಕಿತ್ತುಬಂದು ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಈ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಂಟ್ರಾಕ್ಟರ್ ಹಾಗೂ ಸಂಬಂಧಿಸಿದ ಇಂಜಿನಿಯರ್ಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಜೊತೆಗೆ ರಸ್ತೆ ಗುಣಮಟ್ಟವನ್ನು ಸರಿಯಾಗಿ ಪರಿಶೀಲಿಸದೇ ಕಾಮಗಾರಿ ಅನುಮೋದನೆ ನೀಡಿದ ಅಧಿಕಾರಿಗಳ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.
ಈ ಕೂಡಲೇ ಇಂತಹ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಡಳಿತ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
