ಇರಾನ್‌ನಲ್ಲಿ ಹದಗೆಡುತ್ತಿರುವ ಆರ್ಥಿಕತೆ, ಗಗನಕ್ಕೇರುತ್ತಿರುವ ಆಹಾರ ಪದಾರ್ಥಗಳ ಬೆಲೆ ಮತ್ತು ಕುಸಿಯುತ್ತಿರುವ ಕರೆನ್ಸಿಯ ವಿರುದ್ಧ ಜನರು ಬೃಹತ್ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ವಾಧಿಕಾರಿ ಅಯತೊಲ್ಲಾ ಅಲಿ ಖಮೇನಿ ವಿರುದ್ಧದ ಈ ಹೋರಾಟ 16ನೇ ದಿನಕ್ಕೆ ಕಾಲಿಟ್ಟಿದ್ದು, ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರ ಕೈಗೊಂಡ ಹಿಂಸಾತ್ಮಕ ಕ್ರಮಗಳಿಂದಾಗಿ ಮೃತಪಟ್ಟವರ ಸಂಖ್ಯೆ 648ಕ್ಕೆ ಏರಿಕೆಯಾಗಿದೆ ಮತ್ತು ಸುಮಾರು 10,000 ಜನರನ್ನು ಬಂಧಿಸಲಾಗಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ತಿಳಿಸಿವೆ. ಇದರ ನಡುವೆ, 26 ವರ್ಷದ ಎರ್ಫಾನ್ ಸೋಲ್ಟಾನಿ ಎಂಬ ಹೋರಾಟಗಾರನಿಗೆ ಮೊದಲ ಬಾರಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಆಡಳಿತ ಸಿದ್ಧತೆ ನಡೆಸಿದೆ.
ಅಮೆರಿಕದ ಕಠಿಣ ನಿರ್ಧಾರ
ಇರಾನ್ ಸಂಘರ್ಷದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ನೇರವಾಗಿ ಮಧ್ಯಪ್ರವೇಶಿಸಿದ್ದಾರೆ. ಇರಾನ್ ಜೊತೆ ವ್ಯಾಪಾರ ಮಾಡುವ ಯಾವುದೇ ದೇಶದ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. “ಈ ಆದೇಶವು ಅಂತಿಮ ಮತ್ತು ನಿರ್ಣಾಯಕ” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ತಿಳಿಸಿದ್ದಾರೆ. ಇತ್ತ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಪ್ರತಿಕ್ರಿಯಿಸಿ, “ನಾವು ಯುದ್ಧ ಬಯಸುವುದಿಲ್ಲ, ಆದರೆ ಎದುರಿಸಲು ಸಿದ್ಧರಿದ್ದೇವೆ” ಎಂದಿದ್ದಾರೆ.
