ಪಾಕಿಸ್ತಾನದ ವಿರುದ್ಧ ಟಿ20 ಯುದ್ಧದಲ್ಲಿ ನಿರೀಕ್ಷೆಯಂತೆ 61 ರನ್‌ಗಳ ಜಯ ಸಾಧಿಸಿ ಭಾರತ ಇತಿಹಾಸ ನಿರ್ಮಿಸಿದೆ. ದಾಖಲೆಯ ಜಯದೊಂದಿಗೆ ಗ್ರೂಪ್ ಎ ವಿಭಾಗದಲ್ಲಿ 6 ಅಂಕ ಸಂಪಾದಿಸಿ ಟೀಂ ಇಂಡಿಯಾ ಸೂಪರ್ 8 ಹಂತವನ್ನು ಪ್ರವೇಶಿಸಿದೆ.
ಗೆಲ್ಲಲು 176 ರನ್‌ಗಳ ಕಠಿಣ ಗುರಿಯನ್ನು ಪಡೆದ ಪಾಕಿಸ್ತಾನ 18 ಓವರ್‌ಗಳಲ್ಲಿ114 ರನ್ ಗಳಿಸಿ ಹೀನಾಯ ಸೋಲು ಕಂಡಿದೆ.

ಬ್ಯಾಟಿಂಗ್‌ಗೆ ಸಹಕಾರ ನೀಡದ ಪಿಚ್‌ನಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ನೆರವಾಯ್ತು. ಅಭಿಷೇಕ್ ಶರ್ಮಾ ಮೊದಲ ಓವರ್‌ನಲ್ಲೇ ಶೂನ್ಯಕ್ಕೆ ಔಟಾದರೂ ಇಶನ್ ಕಿಶನ್ ಅಬ್ಬರದ ಬ್ಯಾಟ್ ಬೀಸಿದರು. 27 ಎಸೆತಗಳಲ್ಲಿ ಅರ್ಧಶತಕ ಹೊಡೆದ ಕಿಶನ್ ಅಂತಿಮವಾಗಿ 77 ರನ್(40 ಎಸೆತ, 10 ಬೌಂಡರಿ, 3 ಸಿಕ್ಸ್) ಹೊಡೆದು ಬೌಲ್ಡ್ ಔಟಾದರು.
ಇಶನ್ ಕಿಶನ್ ಕಿಶನ್ ಔಟಾದಾಗ ತಂಡದ ಮೊತ್ತ 88 ರನ್ ಆಗಿತ್ತು ಈ ಪೈಕಿ ಎರಡನೇ ವಿಕೆಟಿಗೆ ಇಶನ್ ಕಿಶನ್ ಮತ್ತು ತಿಲಕ್ ವರ್ಮ 46 ಎಸೆತಗಳಲ್ಲಿ 87 ರನ್ ಜೊತೆಯಾಟ ಆಡಿದ್ದರು. ಈ ಪೈಕಿ ಇಶನ್ ಒಬ್ಬರೇ 76 ರನ್ ಹೊಡೆದಿದ್ದರು. ತಿಲಕ್ ವರ್ಮಾ 25 ರನ್(24 ಎಸೆತ, 2 ಬೌಂಡರಿ, 1 ಸಿಕ್ಸ್) ಸೂರ್ಯಕುಮಾರ್ ಯಾದವ್32 ರನ್(29 ಎಸೆತ,3 ಬೌಂಡರಿ) ಹೊಡೆದು ಔಟಾದರು.
ಕೊನೆಯಲ್ಲಿ ಶಿವಂ ದುಬೆ 27 ರನ್(17 ಎಸೆತ, 3 ಬೌಂಡರಿ, 1 ಸಿಕ್ಸ್) ರಿಂಕು ಸಿಂಗ್ ಔಟಾಗದೇ 11 ರನ್(4 ಎಸೆತ, 1 ಬೌಂಡರಿ, 1ಸಿಕ್ಸ್) ಹೊಡೆದು ತಂಡದ ಮೊತ್ತವನ್ನು 170ರ ಗಡಿಯನ್ನು ದಾಟಿಸಿದರು.
ಈ ಪಂದ್ಯಕ್ಕೆ ಮೊದಲು 2022 ರಲ್ಲಿ ಪಾಕ್ ವಿರುದ್ಧ ಮೆಲ್ಬರ್ನ್‌ನಲ್ಲಿ ಭಾರತ 160 ರನ್ ಗಳಿಸಿದ್ದೇ ದೊಡ್ಡ ಮೊತ್ತವಾಗಿತ್ತು. ಈಗ 175 ರನ್ ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಹೊಡದ ದಾಖಲೆ ಬರೆದಿದೆ.
