ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವುದು ದೂರದೃಷ್ಟಿ ಇಲ್ಲದ, ರಾಜ್ಯದ ಸಮಗ್ರ ಅಭಿವೃದ್ಧಿಯ ಮುನ್ನೋಟ ಇಲ್ಲದ ಸಪ್ಪೆ, ಚಿಲ್ಲರೆ ಬಜೆಟ್ ಎಂದು ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಟಿ.ಎ.ಶರವಣ ಟೀಕಿಸಿದ್ದಾರೆ.
ಶುಕ್ರವಾರ ಮಂಡನೆಯಾದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಸಿದ್ದರಾಮಯ್ಯ ಅವರು ತಮ್ಮ ಆಡಳಿತಾತ್ಮಕ ವೈಫಲ್ಯ ಮುಚ್ಚಿಕೊಳ್ಳಲು, ರಾಜ್ಯದ ಜನರ ಗಮನವನ್ನು ಬೇರೆಡೆ ಸೆಳೆಯಲು ಹೊಸ ತಂತ್ರಗಾರಿಕೆಯನ್ನು ಅನುಸರಿಸಿದ್ದಾರೆ. ಸಣ್ಣ, ಪುಟ್ಟ ಸಹಾಯಧನಗಳ ಘೋಷಣೆ ಬಿಟ್ಟು ರೈತರ ಮೂಲಭೂತ ಸಮಸ್ಯೆಗಳ ಇತ್ಯರ್ಥಕ್ಕೆ ಶಾಶ್ವತ ಪರಿಹಾರಗಳನ್ನು ಅವರು ಘೋಷಣೆ ಮಾಡಿಲ್ಲ. ಬೆಂಬಲ ಬೆಲೆಗಳು, ಆತ್ಮಹತ್ಯೆಯ ಸುಳಿಗೆ ಸಿಕ್ಕ ರೈತನನ್ನು ಬಚಾವ್ ಮಾಡಲು ಸಾಲ ಮನ್ನಾ ಮುಂತಾದ ಸದೃಢ ಘೋಷಣೆಗಳನ್ನು ಮಾಡದೇ ರೈತರ ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದ್ದಾರೆ. ರೈತರಿಗೆ ಅನುಕೂಲ ಎನ್ನುವ ಭ್ರಮೆ ಸೃಷ್ಟಿಸಿ ಮಂಕು ಬೂದಿ ಎರಚಿದ್ದಾರೆ ಎಂದು ಶರವಣ ವಿಶ್ಲೇಷಿಸಿದ್ದಾರೆ.

ಜೊಳ್ಳು ಬಜೆಟ್
ಸಿದ್ದರಾಮಯ್ಯ ಮಂಡಿಸಿರುವುದು ಜೊಳ್ಳು, ಕಳಪೆ ಹಾಗೂ ಕಣ್ಣೊರೆಸುವ ಹಾಗೂ ಮಂಕು ಬೂದಿ ಎರಚುವ ಬಜೆಟ್ ಆಗಿದೆ.
ಸಂಪನ್ಮೂಲ ಕ್ರೋಢೀಕರಣಕ್ಕೆ ಸ್ಪಷ್ಟ ಮೂಲಗಳಿಲ್ಲ. ಅದೇ ಅಬಕಾರಿ, ಅದೇ ಸ್ಟಾಂಪ್ ಡ್ಯೂಟಿ ಇದೆ. ಮೋಟಾರು ವಾಹನ ತೆರಿಗೆ ಇಲಾಖೆ. ಅಬಕಾರಿ ಇಲಾಖೆಗಳಲ್ಲಿ ದರಗಳ ಮೇಲಿನ ನಿಯಂತ್ರಣ ವನ್ನು ಉತ್ಪಾದಕರಿಗೆ ಕೊಡುವ ಮೂಲಕ, ಇಡೀ ವ್ಯವಸ್ಥೆಯ ನಾಶಕ್ಕೆ ಸರ್ಕಾರ ಅವಕಾಶ ಕಲ್ಪಿಸಿದೆ. ಲೈಸೆನ್ಸ್ ಸ್ಲಾಬ್ ಗಳನ್ನು ತಗ್ಗಿಸಿದೆ ಆದರೂ , ಪ್ರತ್ಯೇಕ ಆದೇಶದಲ್ಲಿ ಲೈಸೆನ್ಸ್ ದರ ದುಬಾರಿ ಮೂಲಕ, 45 ಸಾವಿರ ಕೋಟಿ ರೂಪಾಯಿಗಳ ಟಾರ್ಗೆಟ್ ವಿಧಿಸಲಾಗಿದೆ. ಮುದ್ರಾಂಕ ಶುಲ್ಕ ಇಲಾಖೆಗೆ 29 ಸಾವಿರ ರೂಪಾಯಿಗಳ ಟಾರ್ಗೆಟ್ ವಿಧಿಸಿರುವುದು ನೋಡಿದರೆ ತೆರೆಮರೆಯಲ್ಲಿ ಸ್ಟಾಂಪ್ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಳ ಅಥವಾ ಭೂಮಿಯ ಮುಖಬೆಲೆ ಹೆಚ್ಚಳದ ನೆಪದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಯತ್ನಕ್ಕೆ ಸರ್ಕಾರ ಕೈ ಹಾಕಿರುವುದು ಕಂಡುಬರುತ್ತದೆ ಎಂದಿದ್ದಾರೆ.
ಸಾಲದ ಸುಳಿ
ಕಳೆದ ಬಜೆಟ್ ನಲ್ಲಿ ಸರ್ಕಾರದ ತೆರಿಗೆ ಸಂಗ್ರಹದಲ್ಲಿ ಶೇಕಡಾ 25 ರಷ್ಟು ಖೋತಾ ಆಗಿರುವುದನ್ನು ಗಮನಿಸಿದಾಗ, ಈ ಬಾರಿಯೂ ಇನ್ನಷ್ಟು ಭಾರಿ ಪ್ರಮಾಣದಲ್ಲಿ ಸಾಲ ಎತ್ತಿ, ಜನಸಾಮಾನ್ಯರನ್ನು ಇನ್ನಷ್ಟು ಸಾಲಗಾರರಾಗಿ ಮಾಡುವ ಉದ್ದೇಶ ಸಿದ್ದರಾಮಯ್ಯ ಅವರಿಗಿದೆ.
ಅಂಗನವಾಡಿ ನೌಕರರಿಗೆ, ವೃದ್ಧರಿಗೆ, ಅಬಲೆಯರಿಗೆ, ಕೈಗಾರಿಕೆ ಉದ್ಯಮಿಗಳಿಗೆ, ಸಣ್ಣ ಕೈಗಾರಿಕೆಗಳಿಗೆ, ಬಡ ರೈತರಿಗೆ ಏನೇನೂ ಇಲ್ಲ.
ಗೃಹ ಲಕ್ಷ್ಮಿ ಯೋಜನೆ ವೆಚ್ಚ 62ಸಾವಿರ ಕೋಟಿ ಎಂದಾದರೂ, ಅದಕ್ಕೆ ಮೀಸಲಿಟ್ಟ ಹಣ ಬರೀ 28ಸಾವಿರ ಕೋಟಿ ಎನ್ನುವುದು ಆಶ್ಚರ್ಯದ ಸಂಗತಿ.
ವಿಶೇಷವಾಗಿ ಪ್ರಾದೇಶಿಕ ಅಸಮತೋಲನ ಬಗೆಹರಿಸಲು ಇತ್ತೀಚೆಗೆ ಸಲ್ಲಿಕೆಯಾದ ಗೋವಿಂದರಾವ್ ವರದಿ ಜಾರಿ ಮಾಡಿ ಹಿಂದುಳಿದ ಪ್ರದೇಶಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ.
ಇನ್ನು ಎಲ್ಲಕ್ಕೂ ಮುಖ್ಯವಾಗಿ ರಾಜ್ಯದಲ್ಲೂ 2.8 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಬಿದ್ದಿದ್ದು, ಅವುಗಳನ್ನು ತುಂಬುವ ನೀತಿ ಇಲ್ಲ. ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಗ್ಗೆ ಸರ್ಕಾರಕ್ಕೆ ನಿಲುವಿಲ್ಲ.ಹೀಗಾಗಿ ಇದೊಂದು ಬೊಗಳೆ ಬಜೆಟ್ ಎಂದು ಶರವಣ ಅವರು ಟೀಕಿಸಿದ್ದಾರೆ.
