ಉಡುಪಿ: 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ಹೇರುವ ಕುರಿತು ರಾಜ್ಯ ಸರ್ಕಾರ ಡಿಜಿಟಲ್ ಪಾಲಿಸಿ ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹ ಕ್ರಮ ಎಂದು ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಮನೋವೈದ್ಯನಾಗಿ ಸರ್ಕಾರದ ಈ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆಸ್ಪತ್ರೆಯ ವಾರ್ಡ್‌ನಲ್ಲಿ ಪ್ರತಿದಿನ ಇಬ್ಬರು 18 ವರ್ಷದೊಳಗಿನ ಮಕ್ಕಳು ಮಾನಸಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.

ಸಾಮಾಜಿಕ ಜಾಲತಾಣಗಳ ಮೂಲಕ ಅಪರಿಚಿತರಿಂದ ಮೋಸ ಹೋಗುವ ಮಕ್ಕಳ ಸಂಖ್ಯೆಯೂ ಹೆಚ್ಚುತ್ತಿದೆ. ಆದ್ದರಿಂದ ಸರ್ಕಾರದ ಈ ನಿರ್ಧಾರ ಸಮಯೋಚಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆದರೆ ಈ ನಿಯಮವನ್ನು ಜಾರಿಗೆ ತರುವುದು ಸುಲಭವಲ್ಲ. 18 ವರ್ಷದೊಳಗಿನವರಿಗೆ ಬೀಡಿ–ಸಿಗರೇಟು ಮಾರಾಟ ನಿಷೇಧಿಸುವ ಕಾನೂನು ಇದ್ದರೂ ಅದು ಎಷ್ಟು ಮಟ್ಟಿಗೆ ಜಾರಿಯಾಗಿದೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಅದೇ ರೀತಿ ಮೊಬೈಲ್ ಫೋನ್ ಖಾಸಗಿ ಸ್ವತ್ತು ಆಗಿರುವುದರಿಂದ ಮಕ್ಕಳು ಅದರಲ್ಲಿ ಏನು ನೋಡುತ್ತಾರೆ ಎಂಬುದನ್ನು ನಿಯಂತ್ರಿಸುವುದು ಕಷ್ಟಕರವಾಗಿದೆ.
ಈ ಸಮಸ್ಯೆಯನ್ನು ನಿಯಂತ್ರಿಸಲು ಪೋಷಕರು ಹಾಗೂ ಶಾಲಾ ಆಡಳಿತದ ಸಹಕಾರ ಅತ್ಯಗತ್ಯ. ಈಗಾಗಲೇ ಕೆಲವು ಪ್ರತಿಷ್ಠಿತ ಶಾಲೆಗಳು ಮೊಬೈಲ್ ಫೋನ್‌ಗಳನ್ನು ಶಾಲೆಗೆ ತರಲು ಅವಕಾಶ ನೀಡುವುದಿಲ್ಲ. ಸರ್ಕಾರಿ ಶಾಲೆಗಳಲ್ಲೂ ಶಾಲಾ ಅವಧಿಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಆದರೆ ಶಾಲೆಯ ಹೊರಗಡೆ ನಿಯಂತ್ರಣ ಹಾಕುವುದು ಸವಾಲಿನ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದರೆ ಮುಂದಿನ ಪೀಳಿಗೆಯಾದರೂ ನಿಯಂತ್ರಣಕ್ಕೆ ಬರಬಹುದು. ಈಗಿನ ಟೀನೇಜರ್‌ಗಳನ್ನು ನಿಯಂತ್ರಿಸುವುದು ಕಷ್ಟವಾದರೂ 10–12 ವರ್ಷದ ಮಕ್ಕಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ಅನೇಕ ಯುವಜನರು ಆತಂಕ ಹಾಗೂ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ ಅದನ್ನು ಬಿಡಲಾಗದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಶಾಲೆ ಹಾಗೂ ಕಾಲೇಜುಗಳನ್ನು ತೊರೆಯುವ ಪ್ರಕರಣಗಳೂ ಹೆಚ್ಚುತ್ತಿದೆ.ಸಾಮಾಜಿಕ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡಿರುವ ಈ ಜನಪರ ನಿರ್ಧಾರವನ್ನು ಸ್ವಾಗತಿಸಬೇಕು ಎಂದು ಡಾ. ಪಿ.ವಿ.ಭಂಡಾರಿ ಭಂಡಾರಿ ಹೇಳಿದ್ದಾರೆ.
