ಚಿಕ್ಕಮಗಳೂರು: ಬಜೆಟ್ ಮುಗಿದ ತಕ್ಷಣ ರಾಜ್ಯದಲ್ಲಿ ಮತ್ತೆ ಕುರ್ಚಿ ಕದನ ಆರಂಭವಾಗುವ ಲಕ್ಷಣ ಕಾಣಿಸಿಕೊಂಡಿದೆ. ಈ ಬಾರಿ ಸಿದ್ದರಾಮಯ್ಯ ಬಜೆಟ್ ಮುಗೀತು. ಮುಂದಿನ ಬಜೆಟ್ ಡಿಕೆಶಿಯವರದ್ದು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆಪ್ತ ಹಾಗೂ ಕಾಂಗ್ರೆಸ್ಸಿನ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬಾರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದಾರೆ. ಮುಂದಿನ ಬಜೆಟ್ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಮಂಡನೆ ಮಾಡುತ್ತಾರೆ. ಮುಖ್ಯಮಂತ್ರಿಯಾಗಿ ಜನಸಾಮಾನ್ಯರು, ರೈತರ ಪರವಾದ ಬಜೆಟ್ ಮಂಡನೆ ಮಾಡುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ರಾಜ್ಯ ಕಾಂಗ್ರೆಸ್ ಕುರ್ಚಿ ಫೈಟ್ ನಡೆಯುವ ಹೊತ್ತಿನಲ್ಲಿ ಈ ಪೋಸ್ಟ್ ಕಿಚ್ಚು ಹೊತ್ತಿಸಿದೆ.
ಈ ರೀತಿಯ ಚರ್ಚೆಯ ನಡುವೆಯೂ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ, ಡಿಕೆಶಿ ಹಾಗೂ ನನ್ನದು ಹಾಲು-ಜೇನಿನಂತಹ ಸಂಬಂಧ. ಯಾರಿಗೂ ಹುಳಿ ಹಿಂಡೋಕಾಗಲ್ಲ ಎಂದಿದ್ದರು. ಅಲ್ಲದೇ ಕಾಂಗ್ರೆಸ್ (Congress) ಪಕ್ಷದದವರೇ ಸಿಎಂ ಆಗಿರುತ್ತಾರೆ ಎಂದು ಕುರ್ಚಿ ಕದನದ ಹೇಳಿಕೆ ಕೊಡುತ್ತಿದ್ದವರಿಗೆ ಹಾಗೂ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದ ಹೆಚ್‌ಡಿಕೆಗೆ ತಿರುಗೇಟು ನೀಡಿದ್ದರು.
ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ನಮ್ಮ ಶಾಸಕರಲ್ಲಿ ಯಾರೂ ಕೂಡಾ ನನ್ನ ಇಲ್ಲವೇ ಡಿ.ಕೆ.ಶಿವಕುಮಾರ್ ಬೆಂಬಲಿಗರಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸ್ತಾರೆ ಎಂದಿದ್ದರು.
