Saturday, October 31, 2026
Homeಜಿಲ್ಲಾಸುದ್ದಿಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಸ್ಥಳೀಯವಾಗಿಯೇ ಒದಗಬೇಕು: ನಯನಾ ಮೋಟಮ್ಮ

ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳು ಸ್ಥಳೀಯವಾಗಿಯೇ ಒದಗಬೇಕು: ನಯನಾ ಮೋಟಮ್ಮ

Telegram Group
Join Now

ಮೂಡಿಗೆರೆ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿಯೇ ಒದಗಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಈ ಕೇಂದ್ರವು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಅವರು ಗುರುವಾರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ 65 ಲಕ್ಷ ರೂ ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಗುಣಮಟ್ಟ ಹಾಗೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಕೇಂದ್ರ ಆರಂಭವಾದ ಬಳಿಕ ಸಾರ್ವಜನಿಕರು ಇದರ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಆರೋಗ್ಯ ಸಮಸ್ಯೆಗಳು ಎದುರಾದಾಗ ಸೂಕ್ತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಪಡೆದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಗೌಡಹಳ್ಳಿ ಗ್ರಾಮಸ್ಥರು ಶಿಶಿಲ–ಬೈರಾಪುರ ರಸ್ತೆ ನಿರ್ಮಾಣದ ಕುರಿತು ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಈ ರಸ್ತೆ ನಿರ್ಮಾಣಕ್ಕೆ ತಮ್ಮ ಸಹಮತವಿದ್ದು, ಮಳೆಗಾಲದಲ್ಲಿ ಚಾರ್ಮಾಡಿ ಹಾಗೂ ಶಿರಾಡಿ ಘಾಟ್ ಬಂದ್ ಆಗುವ ಸಂದರ್ಭದಲ್ಲಿ ಕರಾವಳಿ ಪ್ರದೇಶಕ್ಕೆ ತೆರಳಲು ಈ ರಸ್ತೆ ಅನುಕೂಲವಾಗಲಿದೆ. ಈಗಾಗಲೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಸ್ಥಿತಿ ಪರಿಶೀಲಿಸಿದ್ದಾರೆ. ಈ ಕುರಿತು ಅರಣ್ಯ ಸಚಿವರೊಂದಿಗೆ ಚರ್ಚಿಸಿ, ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರಕಾರದ ಗಮನ ಸೆಳೆಯಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ನಂತರ ದೇವವೃಂದ ಗ್ರಾಮಕ್ಕೆ ತೆರಳಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಗೊಣಿಬೀಡು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎ.ಜಿ.ಸುಬ್ರಾಯಗೌಡ ಮಾತನಾಡಿ, ದೇವವೃಂದ ಗ್ರಾಮ ಮೂಡಿಗೆರೆ ಮತ್ತು ಸಕಲೇಶಪುರ ಗಡಿ ಭಾಗವಾಗಿದ್ದರಿಂದ ಇಲ್ಲಿಗೆ ಅನುದಾನ ಸಿಗದೇ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ, ಲೋಕೋಪಯೋಗಿ ಸಚಿವರ ಗಮನ ಸೆಳೆದು 9.ಕೋಟಿ ರೂ ಅನುದಾನ ತಂದಿದ್ದಾರೆ. ಇದರಿಂದ ದೇವವೃಂದ ರಸ್ತೆ, ಸೇತುವೆ ಹಾಗೂ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿದರು.

ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಗೌಡಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಡಿ.ಕೆ.ದಿವಾಕರ್, ಗ್ರಾ.ಪಂ. ಮಾಜಿ ಸದಸ್ಯರಾದ ಅಭಿಷೇಕ್, ಸುಚಿತ್ರ ಪ್ರಸನ್ನ, ಪತ್ರಕರ್ತ ಪ್ರಸನ್ನ ಗೌಡಹಳ್ಳಿ, ಕಾಂಗ್ರೆಸ್ ಯುವ ಮುಖಂಡರಾದ ನಿಶಾಂತ್ ಪಟೇಲ್, ಶ್ರೀನಿವಾಸ್ ಬೈದುವಳ್ಳಿ ,ಚಂದ್ರೇಗೌಡ, ಸುಬ್ಬಣ್ಣ ದೇವವೃಂದ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!