ಯುಗಾದಿ ಹಬ್ಬಕ್ಕೆ ಮುನ್ನವೇ ಹಾಸನದಲ್ಲಿ ಆಲಿಕಲ್ಲು ಸಹಿತ ಸುರಿದ ಮಳೆ ಹರ್ಷತರಿಸಿದೆ. ವಾಡಿಕೆಯಂತೆ ವರ್ಷಧಾರೆ ಯುಗಾದಿ ಬಳಿಕವೇ ಪ್ರಾರಂಭವಾಗುತ್ತಿತ್ತು. ಆದರೆ ಈ ಬಾರಿ ಹಬ್ಬಕ್ಕೆ ಮೂರು ದಿನಕ್ಕೆ ಮುನ್ನವೇ ಮಳೆ ಸುರಿದು ರೈತರು ಮತ್ತು ಜನಸಾಮಾನ್ಯರಲ್ಲಿ ಸಂತಸ ಮೂಡಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೆಲವು ಕಡೆ ಭಾನುವಾರ ರಾತ್ರಿ ಗುಡುಗು ಸಹಿತ ಮಳೆಯಾಗಿದ್ದು ಬಿರು ಬಿಸಿಲಿನಿಂದ ಕಾದಕಾವಲಿಯಂತಾಗಿದ್ದ ಇಳೆಗೆ ತಂಪೆರೆದಂತಾಗಿದೆ. ಬೆಳಗ್ಗೆಯಿಂದಲೇ ಅಲ್ಲಲ್ಲಿ ಚದುರಿದಂತೆ ಮೋಡಗಳಿದ್ದವು. ಮಧ್ಯಾಹ್ನದ ಹೊತ್ತಿಗೆ ಆಗಸದಲ್ಲಿ ಕಾರ್ಮೋಡಗಳು ದಟ್ಟೈಸಿದವು. ನರಸಿಂಹರಾಜಪುರ, ಕೊಪ್ಪ, ಕಳಸ ಭಾಗ ದಲ್ಲಿ ಭಾರಿ ಮಳೆಯಾದರೆ, ಶೃಂಗೇರಿಯಲ್ಲಿಸಾಧಾರಣವಾಗಿ ಬಂದಿದೆ. ಚಿಕ್ಕಮಗ ಳೂರು ತಾಲೂಕಿನ ವಸ್ತಾರೆ, ಆಲ್ದೂರು ಹೋಬಳಿಯ ಕೆಲ ಗ್ರಾಮಗಳಲ್ಲಿಉತ್ತಮ ಮಳೆಯಾಗಿದೆ. ಮತ್ತೆ ಕೆಲವೆಡೆ ಗುಡುಗು, ಮಿಂಚು ಆರ್ಭಟದಲ್ಲಿಮಳೆ ಮಾಯ ವಾದರೆ, ಚಿಕ್ಕಮಗಳೂರು ನಗರದಲ್ಲಿತುಂತುರು ಹನಿಗಳ ಸಿಂಚನವಾಗಿದೆ.

ಕೊಡಗು, ಚಿಕ್ಕಮಗಳೂರು, ಬೆಳಗಾವಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಚಿಕ್ಕಮಗಳೂರಿನಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಬಳ್ಳಾರಿ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳಲ್ಲಿ ನಾಳೆ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮಳೆ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
