ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನ ಬೊಟಾನಿಕಲ್ ಗಾರ್ಡನ್‌ನಲ್ಲಿ 220ನೇ ಸ್ವಾತಂತ್ರ್ಯ ದಿನಾಚರಣೆಯ ಫಲಪುಷ್ಪ ಪ್ರದರ್ಶನವು ಆಗಸ್ಟ್ 6 ರಿಂದ 17, 2026ರವರೆಗೆ ನಡೆಯುತ್ತಿದೆ. ಈ ಬಾರಿಯ ಮುಖ್ಯ ಥೀಮ್ ‘ಗಂಗ ಸಾಮ್ರಾಜ್ಯ ವೈಭವ’ ಆಗಿದ್ದು, ಪ್ರಸಿದ್ಧ ಬೇಗೂರು ನಾಗನಾಥೇಶ್ವರ ದೇಗುಲದ ಹೂವಿನ ಪ್ರತಿಕೃತಿಯು ಪ್ರಮುಖ ಆಕರ್ಷಣೆಯಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಚಾಲನೆ ನೀಡಿದರು.
ವಾರಣಾಸಿಯಲ್ಲಿ ರಕ್ಷಣಾ ಇಲಾಖೆ ಜಾಗದಲ್ಲಿ ಉದ್ಯಾನ ನಿರ್ಮಿಸಲು ಪ್ರಧಾನಮಂತ್ರಿಗಳು ಅನುಮತಿ ನೀಡಿದ್ದಾರೆ. ಇದರ ಜೊತೆಗೆ ಬೆಂಗಳೂರು ನಗರದೊಳಗೆ ಇರುವ ಅರಣ್ಯ ಜಾಗದಲ್ಲಿ ಇಂತಹ ಉದ್ಯಾನವನ ನಿರ್ಮಿಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಜಿಬಿಎ, ಬಿಡಿಎ, ತೋಟಗಾರಿಕೆ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಗೆ ಜವಾಬ್ದಾರಿ ವಹಿಸಿ ನಿರ್ಮಿಸಲು ಆಲೋಚಿಸಿದ್ದೇವೆ. ನಮ್ಮ ಕಾಲದಲ್ಲಿ ನಗರದ ಹಸಿರು ಕಾಪಾಡಿ, ಸಾರ್ವಜನಿಕರ ಬದುಕಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಲಾಲ್ ಬಾಗ್ ಕೇವಲ ಉದ್ಯಾನವನ ಮಾತ್ರವಲ್ಲ. ಇದೊಂದು ಇತಿಹಾಸ. ಗಂಗ ಸಾಮ್ರಾಜ್ಯದಲ್ಲಿ ಕೃಷಿಕರು, ರೈತರ ಇತಿಹಾಸವನ್ನು ಇಟ್ಟುಕೊಂಡು ಈ ಫಲಪುಷ್ಟ ಪ್ರದರ್ಶನವನ್ನು ರೂಪಿಸಲಾಗಿದೆ. ಗಂಗರು ಆಗಿನ ಕಾಲದಲ್ಲಿ ಕಟ್ಟಿದ್ದ ಕೆರೆಗಳು ಇಂದಿಗೂ ಉಳಿದಿವೆ. ಕಷ್ಟಕಾಲದಲ್ಲಿ ಆ ಕೆರೆಗಳು ರಕ್ಷಣೆ ಮಾಡಿವೆ. ಗಂಗರ ಇತಿಹಾಸ ಸಮಾನತೆ, ಕೃಷಿಕರ ಬದುಕು, ಹೋರಾಟವನ್ನು ಹೊಂದಿದೆ. ಇದು ನಮ್ಮ ಸಂಸ್ಕೃತಿ, ರೈತರ ಬದುಕು ಹಾಗೂ ಕಲೆಯ ಸಂಭ್ರಮ ಎಂದರು.
