ಚಿಕ್ಕಮಗಳೂರು : ನಗರದ ಐ.ಜಿ. ರಸ್ತೆಯ ಬಸ್ ನಿಲ್ದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್ ಅನ್ನು ಸ್ಥಳಾಂತರ ಮಾಡಲಾಗುತ್ತಿದೆ. ನೂತನ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ

ಇನ್ನು ಮುಂದೆ ಕ್ಯಾಂಟೀನ್ ಕೆ.ಎಂ. ರಸ್ತೆಯ ಶ್ರೀ ಕತ್ರಿಮಾರಮ್ಮ ದೇವಸ್ಥಾನದ ಎದುರಿಗಿರುವ ನಗರಸಭೆ ಮಳಿಗೆಯ ಕೆಳಭಾಗದ ಸೆಲ್ಲಾರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಥಳಾಂತರ ಪ್ರಕ್ರಿಯೆಯ ಕಾರಣದಿಂದಾಗಿ ಮಾರ್ಚ್ 25 ಮತ್ತು 26ರಂದು ಕ್ಯಾಂಟೀನ್‌ನಲ್ಲಿ ಉಪಹಾರ ಹಾಗೂ ಊಟದ ವ್ಯವಸ್ಥೆ ಇರುವುದಿಲ್ಲ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 27ರಿಂದ ಹೊಸ ಸ್ಥಳದಲ್ಲಿ ಎಂದಿನಂತೆ ಸೇವೆ ಲಭ್ಯವಿರಲಿದೆ. ಪ್ರತಿನಿತ್ಯ ಸುಮಾರು 1500 ಜನರಿಗೆ ಆಸರೆಯಾಗಿದ್ದ ಈ ಕ್ಯಾಂಟೀನ್ ಸ್ಥಳ ಬದಲಾವಣೆಯಿಂದಾಗಿ, ಇದನ್ನು ನಂಬಿಕೊಂಡಿದ್ದ ಬಡ ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರಿಗೆ ತಾತ್ಕಾಲಿಕವಾಗಿ ಸಮಸ್ಯೆಯುಂಟಾಗಿದೆ.
ಬೆಳಗ್ಗೆ 600, ಮಧ್ಯಾಹ್ನ 600 ಹಾಗೂ ರಾತ್ರಿ 300 ಜನರಿಗೆ ಆಹಾರ ಸಿದ್ಧಪಡಿಸುತ್ತಿದ್ದ ಈ ಕೇಂದ್ರವು ನಗರದ ಪ್ರಮುಖ ಹಸಿವು ನೀಗಿಸುವ ತಾಣವಾಗಿತ್ತು. ಇದೀಗ ಸ್ಥಳ ಬದಲಾಗಿರುವುದು ಮತ್ತು ಎರಡು ದಿನ ಸೇವೆ ಸ್ಥಗಿತಗೊಂಡಿರುವುದು ಬಡವರ ಪಾಲಿಗೆ ಕಷ್ಟಕರವಾಗಿ ಪರಿಣಮಿಸಿದೆ. ಸಾರ್ವಜನಿಕರು ಈ ಬದಲಾವಣೆಯನ್ನು ಗಮನಿಸಿ ಸಹಕರಿಸಬೇಕೆಂದು ಪೌರಾಯುಕ್ತರು ಮನವಿ ಮಾಡಿದ್ದಾರೆ.
