ಕಳಸ ತಾಲೂಕಿನ ಕೆ. ಕೆಳಗೂರು ಗ್ರಾಮದ ಕಾಫಿ ಎಸ್ಟೇಟ್ ಒಂದರಲ್ಲಿ ಸಾಕು ನಾಯಿಯೊಂದು ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದ್ದು, ಏಳು ವರ್ಷದ ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ.
ತಮಿಳುನಾಡು ಮೂಲದ ಕಾರ್ಮಿಕ ದಂಪತಿಗಳು ಕೆಲಸ ಅರಸಿ ಕಳಸ ತಾಲೂಕಿನ ಕೆ. ಕೆಳಗೂರು ಗ್ರಾಮದ ಕಾಫಿ ಎಸ್ಟೇಟ್ಗೆ ಬಂದಿದ್ದರು. ಏಳು ವರ್ಷದ ಮಗ ಮದನ್, ಎಸ್ಟೇಟ್ ಆವರಣದಲ್ಲಿದ್ದಾಗ ಅಲ್ಲೇ ಇದ್ದ ಸಾಕು ನಾಯಿಯೊಂದು ಹಠಾತ್ತನೆ ದಾಳಿ ಮಾಡಿದೆ. ನಾಯಿ ಬಾಲಕನ ಮೇಲೆರಗಿ ಕುತ್ತಿಗೆ ಮತ್ತು ಕಾಲಿನ ಭಾಗವನ್ನು ಬಲವಾಗಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ.

ನಾಯಿ ದಾಳಿಯಿಂದ ತೀವ್ರ ರಕ್ತಸ್ರಾವವಾಗಿ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ. ತಕ್ಷಣವೇ ಮದನ್ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಗಾಯದ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಂಗಳೂರಿನಲ್ಲಿ ಬಾಲಕನಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಕಳಸ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಸಾಕು ನಾಯಿಗಳ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕಳಸ ಪೊಲೀಸ್ ಠಾಣೆ ದೂರು ದಾಖಲಾಗಿದೆ.
