ಮೂಡಿಗೆರೆ: ಪಟ್ಟಣದ ವಾರ್ಡ್ ಸಂಖ್ಯೆ 9 ರ ಜೆ.ಎಂ ರಸ್ತೆ, ಮೊದಲನೇ ಕ್ರಾಸ್ ನಲ್ಲಿ ಚರಂಡಿ ದುರಸ್ತಿಗಾಗಿ ಈ ಹಿಂದೆ ಇದ್ದಂತಹ ಚರಂಡಿಯನ್ನು ಅಗೆದು 6 ತಿಂಗಳು ಕಳೆದರೂ ಕೂಡ ಇದುವರೆಗೆ ಹೊಸ ಚರಂಡಿ ನಿರ್ಮಾಣ ಕಾಮಗಾರಿ ನಡೆಸದೆ, ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯ ನಿವಾಸಿಗಳು, ಸಾರ್ವಜನಿಕರು ತಮಗಾಗುತ್ತಿರುವ ತೊಂದರೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ SDPI ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಜ್ವಾನ್ ಹುಸೇನ್ ರವರು ಮಾತನಾಡಿ ಬೆಂಗಳೂರು ಮೂಲದ ಗುತ್ತಿಗೆದಾರನಿಗೆ ಇಲ್ಲಿನ ಚರಂಡಿ ನಿರ್ಮಾಣ ಗುತ್ತಿಗೆ ನೀಡಲಾಗಿದ್ದು, ಸ್ಥಳೀಯ ಕೆಲಸಗಾರರು ಬಂದು ಈ ಹಿಂದೆ ಇದ್ದಂತಹ ಚರಂಡಿಯನ್ನು ಅಗೆದು ಹೋಗಿದ್ದಾರೆ. ಆದರೆ 6 ತಿಂಗಳು ಕಳೆದರೂ ಕೂಡ ಇಲ್ಲಿಯವರೆಗೆ ಅದನ್ನು ನಿರ್ಮಿಸುವ ಕಾರ್ಯ ಪೂರ್ಣಗೊಳಿಸಿಲ್ಲ.
ಕೆ.ಎಂ ರಸ್ತೆಯಲ್ಲಿರುವ ಹೋಟೆಲ್, ಬೇಕರಿ, ಬಾರ್ ಅಂಡ್ ರೆಸ್ಟೋರೆಂಟ್ ಗಳ ಗಲೀಜು ನೀರು, ತ್ಯಾಜ್ಯ ಇದೇ ಚರಂಡಿಯಿಂದ ಹರಿಯುವುದರಿಂದ, ಚರಂಡಿ ಇಲ್ಲದೆ ನೀರು ಸರಿಯಾಗಿ ಹರಿಯದೆ ತ್ಯಾಜ್ಯ ತುಂಬಿ ಗಬ್ಬೆದ್ದು ನಾರುತ್ತಿದೆ, ಅಲ್ಲದೆ ನೀರು ಹರಿಯದೆ ತ್ಯಾಜ್ಯ ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ, ಹಾಗೂ ಮಳೆ ನೀರಿನ ಜೊತೆಯಲ್ಲಿ ತ್ಯಾಜ್ಯ ಅಕ್ಕ ಪಕ್ಕದ ಮನೆಯಂಗಳಕ್ಕೆ ಬರುತ್ತಿದ್ದು ಸ್ಥಳೀಯ ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೇವಲ ಆಶ್ವಾಸನೆ ನೀಡದೇ ಇಲ್ಲಿನ ಸಮಸ್ಯೆ ಶೀಘ್ರದಲ್ಲಿ ನಿವಾರಿಸದಿದ್ದರೇ, ಸ್ಥಳೀಯ ನಿವಾಸಿಗಳು, ಸಾರ್ವಜನಿಕರನ್ನು ಸೇರಿಸಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ SDPI ಜಿಲ್ಲಾ ಸಮಿತಿ ಸದಸ್ಯರಾದ ಸಿಕಂದರ್ ಪಾಷ, ಜೆ.ಎಂ ರಸ್ತೆ ಘಟಕ ಅಧ್ಯಕ್ಷ ಫೈಜ್ ಹುಸೇನ್, ಸ್ಥಳೀಯರಾದ ಜಾಹೆದ್, ರಫೀಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು..
