ಚಿಕ್ಕಮಗಳೂರು: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ (ESA) ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆ ಮಲೆನಾಡು ಮತ್ತು ಕರಾವಳಿ ಭಾಗದ ಜನತೆಯಲ್ಲಿ ತೀವ್ರ ಆಘಾತ ಹಾಗೂ ಆತಂಕವನ್ನುಂಟು ಮಾಡಿದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಕಟುಶಬ್ದಗಳಲ್ಲಿ ಎಚ್ಚರಿಸಿದ್ದಾರೆ.
ಈ ಅಧಿಸೂಚನೆಯಿಂದ ರೈತರಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದ್ದು, ಈ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಉಡುಪಿ-ಚಿಕ್ಕಮಗಳೂರು ಸಂಸದರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಕರಡು ಅಧಿಸೂಚನೆಯ ಅನುಬಂಧ-‘ಸಿ’ ಪ್ರಕಾರ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಸಾವಿರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದ್ದಾರೆ.
ಉಡುಪಿ ಜಿಲ್ಲೆಯ 34 ಮತ್ತು ಚಿಕ್ಕಮಗಳೂರು ಜಿಲ್ಲೆಯ 137 ಗ್ರಾಮಗಳು ಈ ಸೂಕ್ಷ್ಮ ಪ್ರದೇಶದ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳ ವ್ಯಾಪ್ತಿಯ ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ
