ದಾವಣಗೆರೆ: ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೊಳಿಸುವ ಕೇಂದ್ರ ಸರ್ಕಾರದ ಹುನ್ನಾರ ದೇಶದ ಜನರ ಮುಂದೆ ಬಯಲಾಗಿದೆ. ಬಿಜೆಪಿಯು ಪಂಚರಾಜ್ಯಗಳ ಚುನಾವಣೆ
ಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಮಸೂದೆ ಮಂಡನೆ ಮಾಡಲು ಹೋಗಿ ಮುಖಭಂಗಕ್ಕೀಡಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕವಿತಾ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಿಳಾ ಮೀಸಲಾತಿ ಮಸೂದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಮಹಿಳೆಯರ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಹೇಳುತ್ತಿರುವ ಬಿಜೆಪಿಯು ಮಹಿಳೆಯರ ಭಾವನೆ ಜೊತೆ ಚೆಲ್ಲಾಟ ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಪ್ರತಿಪಕ್ಷಗಳು ಡಿಲಿಮಿಟೇಶನ್ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆಯೇ ವಿನಾಃ ಮಹಿಳಾ ಮೀಸಲಾತಿ ಮಸೂದೆಗಲ್ಲ. ಕೇಂದ್ರ ಸರ್ಕಾರವು ಪ್ರಾಮಾಣಿಕವಾಗಿದ್ದರೆ 2023 ರ ಕಾನೂನನ್ನು ಜಾರಿಗೆ ತರಬೇಕು. ನಾರಿ ಶಕ್ತಿ ವಂದನ ಚೌಕಟ್ಟು ಎಂದು ವ್ಯಾಪಕವಾಗಿ ಕರೆಯಲ್ಪಡುವ 2023ರ ಕಾನೂನು, ಶಾಸಕಾಂಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿಯ ಅನುಷ್ಠಾನವನ್ನು ಹೊಸ ಜನಗಣತಿಯನ್ನು ಪೂರ್ಣಗೊಳಿಸಿ ನಂತರ ಡಿಲಿಮಿಟೇಶನ್ ಬಗ್ಗೆ ಚರ್ಚಿಸಿ
ಅನುಷ್ಠಾನಗೊಳಿಸಲಿ. ಅದನ್ನು ಬಿಟ್ಟು ವಿನಾಕಾರಣ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಸೋಲಾಗಿರುವುದು “ಪ್ರಜಾಪ್ರಭುತ್ವದ ಗೆಲುವು. ಭಾರತದ ಒಕ್ಕೂಟ ರಚನೆ ಬದಲಾಯಿಸಲು ಮುಂದಾಗಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ. ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಪಿತೂರಿಗೆ ತಕ್ಕ ಉತ್ತರ ನೀಡಲಾಗಿದೆ. ಇದು ಸಂವಿಧಾನಕ್ಕೆ ಸಿಕ್ಕ ಗೆಲುವು, ದೇಶಕ್ಕೆ, ವಿರೋಧ ಪಕ್ಷದ ಒಗ್ಗಟ್ಟಿಗೆ ಸಿಕ್ಕ ಗೆಲುವು. ಉತ್ತರ ಭಾರತದಲ್ಲಿ ಹೆಚ್ಚು ಸ್ಥಾನಗಳನ್ನು ಸೃಷ್ಟಿಸಿ ಹೇಗಾದರೂ ಅಧಿಕಾರದಲ್ಲಿ ಉಳಿಯಬೇಕೆಂಬ ಬಿಜೆಪಿಯ ಪಿತೂರಿ ಜನರಿಗೆ
ಅರ್ಥವಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕಡಿಮೆ ಸ್ಥಾನ ಆಗುವ ಆತಂಕ ಇದೆ. ಯಾವುದೇ ರೀತಿಯಲ್ಲಿಯೂ ಚರ್ಚಿಸದೇ ಏಕಾಏಕಿ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಜಾರಿಗೆ ಮುಂದಾಗಿದ್ದೇಕೆ ಎಂದು ಕವಿತಾ ಚಂದ್ರಶೇಖರ್
ಪ್ರಶ್ನಿಸಿದ್ದಾರೆ.
