ಹಾಸನ: ಮೈಸೂರು ದಸರಾ ಅಂಬಾರಿಯನ್ನು 8 ಬಾರಿ ಹೊತ್ತಿದ್ದ ಅರ್ಜುನ ನಮ್ಮ ಹೆಮ್ಮೆ. ಆತನನ್ನು ನೆನೆದಾಗ ನಮಗೆಲ್ಲ ದುಃಖವಾಗುತ್ತದೆ. ಸರ್ಕಾರಕ್ಕೆ ಸೇವೆ ಸಲ್ಲಿಸಿ, ರಾಜ್ಯದ 7 ಕೋಟಿ ಜನರ ಮನ ಗೆದ್ದಿದ್ದಾನೆ ಎಂದು ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಹೇಳಿದರು.
ಸಕಲೇಶಪುರ ತಾಲೂಕಿನ ಯಸಳೂರಿನ ದಬ್ಬಳಿಕಟ್ಟೆ ನೆಡುತೋಪಿನಲ್ಲಿ ನಿರ್ಮಿಸಿರುವ ಹುತಾತ್ಮ ಅರ್ಜುನ ಆನೆಯ 650 ಕೆ.ಜಿ ತೂಕದ ಸುಂದರ ಸ್ಮಾರಕವನ್ನು ಬುಧವಾರ ಸಂಜೆ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಪ್ರವಾಸಿಗರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹುತಾತ್ಮ ಅರ್ಜುನನ ಸ್ಮಾರಕ ಸ್ಥಳಕ್ಕೆ ಹೋಗಲು ಈಗ ನಿರ್ಮಿಸಿರುವ ಕಚ್ಚಾ ರಸ್ತೆಯಲ್ಲಿ ಪಕ್ಕಾ ರಸ್ತೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಸ್ಮಾರಕ ಪ್ರದೇಶ ಆನೆ ಸಂಚರಿಸುವ ಸ್ಥಳವಾಗಿದ್ದು, ಇಲ್ಲಿಗೆ ಬರುವ ಪ್ರವಾಸಿಗರ ಸುರಕ್ಷತೆಯೂ ನಮಗೆ ಪ್ರಥಮ ಆದ್ಯತೆಯಾಗಿದೆ ಎಂದರು.
ಸತತವಾಗಿ ಎಂಟು ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜ ಗಾಂಭೀರ್ಯದಿಂದ ಅಂಬಾರಿ ಹೊತ್ತ ಅರ್ಜುನ ಬಹಳ ಹೆಸರುವಾಸಿಯಾಗಿದ್ದ. ಆತನನ್ನು ನೆನೆದರೆ ದುಃಖವಾಗುತ್ತದೆ. ಬೌದ್ಧಿಕವಾಗಿ ಅರ್ಜುನ ನಮ್ಮೊಂದಿಗೆ ಇಲ್ಲ. ಆದರೆ, ಆತ ಎಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿದ್ದಾನೆ. ಪುಂಡಾನೆಗಳನ್ನು ಹಿಡಿಯುವ ಕಾರ್ಯಾಚರಣೆ ಸಂದರ್ಭದಲ್ಲಿ ವೀರ ಮರಣ ಹೊಂದಿದ್ದು ದುಃಖದ ಸಂಗತಿ ಎಂದು ತಿಳಿಸಿದರು.
ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು. ಕಾರ್ಯಾಚರಣೆಯ ವೇಳೆ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವಾಗ ಕಾಡಾನೆಗೆ ಅರವಳಿಕೆ ಚುಚ್ಚು ಮದ್ದು ನೀಡುವ ಸಂದರ್ಭ ಅರ್ಜುನನ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು. ಆಗ ಉಳಿದ ಮೂರು ಸಾಕಾನೆಗಳು ಓಡಿ ಹೋಗಿದ್ದವು. ಈ ಘಟನೆಯಲ್ಲಿ ಅರ್ಜುನ ಆನೆ ಒಂಟಿಸಲಗದ ಜೊತೆ ಒಂಟಿಯಾಗಿ ಹೋರಾಡಿತ್ತು. ಒಂಟಿಸಲಗ ದಂತದಿಂದ ತಿವಿದ ಕಾರಣ 2023ರ ಡಿಸೆಂಬರ್ 4ರಂದು ಅರ್ಜುನ ಸಾವನ್ನಪ್ಪಿತ್ತು.
