ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಅದ್ಭುತ ಯಶಸ್ಸಿನ ಹಿಂದೆ ರಾಜ್ಯದ ವ್ಯಕ್ತಿಯೊಬ್ಬರ ಚಾಣಾಕ್ಷತನ ಹಾಗೂ ತಂತ್ರಗಾರಿಕೆಯೂ ಪ್ರಮುಖ ಪಾತ್ರ ವಹಿಸಿರುವುದು ರಾಜಕೀಯ ವಲಯದ ಗಮನ ಸೆಳೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದ ಯುವಕ ಅರುಣ್ ಬಿನ್ನಡಿ ಅವರ ರಾಜಕೀಯ ಕಾರ್ಯಚಟುವಟಿಕೆಗಳು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವಿನ ಹಿಂದೆ ಕೇವಲ ಘಟಾನುಘಟಿ ನಾಯಕರಷ್ಟೇ ಅಲ್ಲದೆ, ತೆರೆಮರೆಯಲ್ಲಿ ನಿಂತು ತಂತ್ರ ರೂಪಿಸಿದ ಯುವಕ ಅರುಣ್ ಬಿನ್ನಡಿ ಅವರ ಶ್ರಮವೂ ದೊಡ್ಡದಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಕಾಫಿನಾಡಿನ ಈ ಯುವ ನಾಯಕ, ಕೈತುಂಬಾ ಸಂಬಳದ ಉದ್ಯೋಗವನ್ನು ತೊರೆದು ದೇಶಸೇವೆಗೆ ಮುಂದಾದವರು. ತನ್ನ ಪರಿಶ್ರಮ, ತಂತ್ರಗಾರಿಕೆ ಹಾಗೂ ಸಂಘಟನಾ ಸಾಮರ್ಥ್ಯದ ಮೂಲಕ ರಾಜಕೀಯ ವಲಯದಲ್ಲಿ ವಿಶಿಷ್ಟ ಗುರುತು ಗಳಿಸಿದ್ದಾರೆ. 2019ರ ಲೋಕಸಭೆ ಚುನಾವಣೆ ಸೇರಿದಂತೆ ಹಲವು ಪ್ರಮುಖ ಚುನಾವಣೆಯಲ್ಲಿ ಅವರು ಮಹತ್ವದ ಪಾತ್ರವಹಿಸಿರುವುದು ಗಮನಾರ್ಹ.
ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಭಾಗದಲ್ಲೂ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಬಿನ್ನಡಿ ತಮ್ಮದೇ ಆದ ಛಾಪು ಮೂಡಿಸಿದ್ದರು. ತಮ್ಮ ಮೇಲೆ ಬಂದ ಪ್ರತಿಯೊಂದು ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಬರುವಲ್ಲಿ ಯಶ ಕಂಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸಿಲಿಗುರಿ ನಾರ್ತ್ ಜೋನ್ ಸಂಘಟನಾ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದ ಅರುಣ್, ತಿಂಗಳುಗಟ್ಟಲೆ ನೆಲಮಟ್ಟದಲ್ಲಿ ಕಾರ್ಯನಿರ್ವಹಿಸಿ ಜಯದ ತಂತ್ರ ರೂಪಿಸಿದರು. ಸ್ಥಳೀಯ ಪರಿಸ್ಥಿತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಮತದಾರರ ಮನಸ್ಥಿತಿಗೆ ಹೊಂದುವಂತೆ ಪ್ರಚಾರ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜಕೀಯ ಅಡೆತಡೆಗಳ ನಡುವೆಯೂ ತಮ್ಮ ಸಂಘಟನಾ ಸಾಮರ್ಥ್ಯದಿಂದ ಮತ್ತೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿರುವುದು ವಿಶೇಷ.
ತನ್ನ ಸ್ವಗ್ರಾಮ ಬಿನ್ನಡಿಗೆ ಆಗಮಿಸಿದ ಅರುಣ್ ಅವರಿಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನ ಮಾಡಿದರು. ಕೊಟ್ಟಿಗೆಹಾರ ಸಮೀಪದ ಬಿನ್ನಡಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದು, ”ಕರ್ನಾಟಕದ ಹುಡುಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಹೆಮ್ಮೆಯ ಕ್ಷಣ” ಎಂದು ಸಂತಸ ವ್ಯಕ್ತಪಡಿಸಿದರು.
