ಕೊಪ್ಪ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿರುವ ದಕ್ಷಿಣ ಭಾರತದ ಮೊದಲ ಕಾಡುಕೋಣಗಳ ಸ್ಥಳಾಂತರ ಕಾರ್ಯಾಚರಣೆಯ ಪ್ರಕ್ರಿಯೆಗೆ ಪರಿಸರವಾದಿಗಳು ಹಾಗೂ ವನ್ಯಜೀವಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಅರಣ್ಯ ವಿಭಾಗದಲ್ಲಿ ಆರೋಗ್ಯವಂತ ಕಾಡುಕೋಣ/ಕಾಟಿ ಸೆರೆ ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಹೊರಟಿದೆ. ಇದೊಂದು ಅವೈಜ್ಞಾನಿಕವಾದ ಕ್ರಮವಾಗಿದೆ ಎಂದು ಪರಿಸರವಾದಿ ನಾಗರಾಜ ಕೂವೆ ಕಿಡಿ ಕಾರಿದ್ದಾರೆ.
ಹೌದು .. ಈಗಾಗಲೇ ಚಿಕ್ಕಮಗಳೂರಿನ ಅರಣ್ಯಾಧಿಕಾರಿಗಳ ತಂಡ ಮಧ್ಯಪ್ರದೇಶದಕ್ಕೆ ಹೋಗಿ ಕಾಟಿ ಸ್ಥಳಾಂತರದ ಬಗೆಗೆ ಅಧ್ಯಯನ ಮಾಡಿಕೊಂಡು ಬಂದಿದ್ದಾರೆ ಎಂಬ ಮಾಹಿತಿ ಇದೆ. “ಅಲ್ಲಿ ಸ್ಥಳಾಂತರ ಯಶಸ್ವಿ ಆಗಿದೆ, ಇಲ್ಲೂ ಅದನ್ನು ಪ್ರಯೋಗ ಮಾಡಬಹುದು” ಎಂದು ಅಧಿಕಾರಿಗಳು ಹೊರಟಿದ್ದಾರೆ. ಇದು ಸಮಂಜಸವಾದ ನಡೆಯಲ್ಲ ಎಂದರು.
ಹಾಗೆ ಮಾನವ-ಕಾಟಿ ಸಂಘರ್ಷದ ದೃಷ್ಟಿಕೋನದಲ್ಲಿ, ಪಶ್ಚಿಮ ಘಟ್ಟದ ಕಾಟಿಗಳನ್ನು ಗಣನೆಗೆ ತೆಗೆದುಕೊಂಡು ವೈಜ್ಞಾನಿಕ ಅಧ್ಯಯನವನ್ನು ನೆಡೆಸಲಾಗಿದೆಯೇ? ಇಲ್ಲಿ ಎಷ್ಟು ಕಾಟಿಗಳಿವೆ ಅಥವಾ ಎಷ್ಟು ಕಾಟಿಗಳ ಗುಂಪುಗಳಿವೆ ಎಂಬ ಗಣತಿ ಮಾಡಲಾಗಿದೆಯೇ? ಇಲ್ಲಿಯೂ ಅದು ಯಶಸ್ವಿ ಆಗುತ್ತದೆ ಎಂಬುದಕ್ಕೆ ಖಾತ್ರಿಯೇನು? ಮಧ್ಯಪ್ರದೇಶದ ಭೂಸ್ವರೂಪ, ಸಸ್ಯ ವೈವಿಧ್ಯ, ಮಳೆ ಪ್ರಮಾಣ ಇತ್ಯಾದಿಗಳು ಪಶ್ಚಿಮ ಘಟ್ಟಕ್ಕಿಂತ ಸಂಪೂರ್ಣ ಭಿನ್ನವಲ್ಲವೇ? ಸೆರೆ ಕಾರ್ಯಾಚರಣೆ ವೇಳೆ ಕಾಟಿ ಸತ್ತು ಹೋದಲ್ಲಿ ಹೊಣೆಗಾರರು ಯಾರು? ಎಂದು ಪ್ರಶ್ನೆ ಮಾಡಿದರು.
ಕಾಡುಕೋಣಗಳ ವರ್ತನೆ ಹಾಗೂ ಸಾಮಾಜಿಕ ನಡವಳಿಕೆ
ಕಾಟಿಗಳು ಗುಂಪುಗಳಲ್ಲಿ ವಾಸಿಸುವ ಜೀವಿಗಳು. ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟ ಭಾಗದಲ್ಲಿ ಬಹುಪಾಲು ಕಾಡು ನಾಶವಾಗಿ ಈಗ, ಹಲವು ಕಾಟಿಗಳು ಕಾಫಿ, ಟೀ ಪ್ಲಾಂಟೇಶನ್ ಗಳಲ್ಲೇ ಆಶ್ರಯ ಪಡೆಯಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಕಾಟಿಗಳೊಂದಿಗೆ ಸ್ಥಳೀಯ ರೈತರು ಮತ್ತು ಕೂಲಿ ಕಾರ್ಮಿಕರು ಹಲವು ವರ್ಷಗಳಿಂದ ಸಹಜೀವನ ನಡೆಸುತ್ತಾ ಬಂದಿದ್ದಾರೆ. ಅಷ್ಟಾಗಿಯೂ, ದುರಾದೃಷ್ಟವಶಾತ್ ಇಲ್ಲಿಯವರೆಗೆ ಕಾಟಿ ದಾಳಿಯಿಂದ ನಾಲ್ಕೈದು ಪ್ರಕರಣಗಳಲ್ಲಿ ಮನುಷ್ಯರ ಸಾವಾಗಿದೆ. ವಾಸ್ತವವಾಗಿ, ಗಾಯಗೊಂಡ ಅಥವಾ ಅಂಗವಿಕಲ ಕಾಟಿಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡುವುದು ಸೂಕ್ತವಾದ ಕ್ರಮ. ಆದರೆ, ಆರೋಗ್ಯವಂತ ಕಾಟಿಗಳನ್ನು ಸುಖಾಸುಮ್ಮನೆ ಸೆರೆ ಹಿಡಿಯುವುದು ಒಪ್ಪಬಹುದಾದ ವಿಚಾರವಲ್ಲ.
ಕಾಟಿ ಸೆರೆ ಕಾರ್ಯಾಚರಣೆ ಹೆಸರಿನಲ್ಲಿ, ಒಂದು ಗುಂಪಿನ ಒಂದೆರಡು ಅಥವಾ ಕೆಲವು ಕಾಟಿ ಹಿಡಿಯುವುದು ತುಂಬಾ ಅಪಾಯಕಾರಿ. ಏಕೆಂದರೆ, ಈ ಇಡೀ ಸೆರೆ ಕಾರ್ಯಾಚರಣೆಯು, ಕಾಟಿ ಗುಂಪಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಮುಂದೆ ಹಿಡಿಯದೇ ಬಿಟ್ಟಂತಹ, ಅದೇ ಗುಂಪಿನ ಕಾಟಿಗಳು, ಆಕ್ರಮಣ ಸ್ವಭಾವ ಬೆಳೆಸಿಕೊಳ್ಳುವ, ದಾಳಿಗೆ ಮುಂದಾಗುವ ಎಲ್ಲಾ ಸಾಧ್ಯತೆಗಳಿವೆ. ಆಗ ಸಂಘರ್ಷ ಮತ್ತಷ್ಟು ಹೆಚ್ಚುತ್ತದೆ. ಇಲ್ಲಿಯವರೆಗೆ ಕೆಲವೇ ಪ್ರಕರಣಗಳ ಹೊರತಾಗಿ, ಅಷ್ಟೊಂದು ಆಕ್ರಮಣ ಸ್ವಭಾವ ತೋರಿಸದೇ ಅವುಗಳ ಪಾಡಿಗೆ ಅವು ಇರುವ ಕಾಟಿಗಳು ಕೂಡಾ ಮುಂದೆ ಮನುಷ್ಯರನ್ನು ಅಟ್ಟಿಸಿಕೊಂಡು ಬರುವ, ದಾಳಿ ಮಾಡುವ ಅಪಾಯವಿದೆ. ಇದು ಮನುಷ್ಯರಿಗಷ್ಟೇ ಅಲ್ಲ, ಕಾಟಿಗಳ ಜೀವಕ್ಕೂ ಅಪಾಯ.
ತಜ್ಞತೆ ಮತ್ತು ಉತ್ತರದಾಯಿತ್ವದ ಕೊರತೆ
ಕಾಟಿಗಳನ್ನು ಹಿಡಿದು ಸ್ಥಳಾಂತರ ಮಾಡುವ ತಜ್ಞತೆ ಕರ್ನಾಟಕದಲ್ಲಿ ಯಾರಿಗಿದೆ? ಇಲ್ಲಿಯವರೆಗೆ ಅರಣ್ಯ ಇಲಾಖೆ ಹಿಡಿದ ಬಹುಪಾಲು ಕಾಟಿಗಳು ಒಂದೋ ಗಾಯಗೊಂಡಿವೆ ಇಲ್ಲವೇ ಸತ್ತು ಹೋಗಿವೆ. ಬದುಕಿ ಉಳಿದಿರುವವುಗಳ ಸಂಖ್ಯೆ ವಿರಳ. ಯಶಸ್ವಿ ಕಾರ್ಯಾಚರಣೆಗಳು ಬೆರಳೆಣಿಕೆ. ಕಾಟಿ ಹಿಡಿದು ಸ್ಥಳಾಂತರ ಮಾಡುತ್ತೇವೆ ಎಂದು ಕಾಟಿಗಳಿಗೆ ಹಾನಿ ಮಾಡಿದರೆ ಜವಾಬ್ದಾರಿ ಯಾರದ್ದು? ಇಲ್ಲಿಯವರೆಗೆ ಹಿಡಿಯಲು ಹೋದ ಬೇರೆ ಬೇರೆ ಪ್ರಾಣಿಗಳಲ್ಲಿ ಅವುಗಳ ಸಾವಾದಾಗ ಅಥವಾ ಗಾಯಗೊಂಡಾಗ ಉತ್ತರದಾಯಿತ್ವ ಯಾರಿಗೂ ಇಲ್ಲೂ ಎಂಬುದನ್ನು ಇತಿಹಾಸ ಹೇಳುತ್ತಿದೆ.
ಕಾಟಿ ಹಿಡಿಯುವುದು, ಕಾಟಿ ಸಮಸ್ಯೆಗೆ ಪರಿಹಾರವೇ ಅಲ್ಲ. ಯಾವುದೇ ವನ್ಯಜೀವಿಗಳನ್ನು ಒಂದು ಕಡೆ ಹಿಡಿದು, ಇನ್ನೊಂದು ಕಡೆ ಬಿಡುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಒಮ್ಮೊಮ್ಮೆ ಸಮಸ್ಯೆ ಬೇರೆ ಸ್ವರೂಪ ಪಡೆದುಕೊಳ್ಳುತ್ತದೆ. ಇದಕ್ಕೆ ಜಗತ್ತಿನ ಹಲವು ಉದಾಹರಣೆಗಳಿವೆ. ಕಾಟಿ ಹಿಡಿಯುತ್ತೇವೆ ಎಂದು ಅರಣ್ಯ ಇಲಾಖೆಯು ಜನರ ಇನ್ನೊಂದಿಷ್ಟು ತೆರಿಗೆ ಹಣ ಪೋಲು ಮಾಡುವುದು ವಿವೇಕಯುತ ನಡೆಯಲ್ಲ. ಸಮಸ್ಯೆಗಳ ಮೂಲ ಕಾರಣಗಳನ್ನು ಆದ್ಯತೆಯಾಗಿ ತೆಗೆದುಕೊಳ್ಳದೇ ಏನೇನೋ ಮಾಡುವುದು, ಸುಮ್ಮನಿರುವುದಕ್ಕಿಂತ ಹೆಚ್ಚು ಅಪಾಯಕಾರಿ.
ಅರಣ್ಯ ಇಲಾಖೆಯ ಮುಖ್ಯ ಕರ್ತವ್ಯದ ಕುರಿತು ಪ್ರಶ್ನೆಗಳು
ಕಾಟಿಗಳ ಬಗೆಗೆ ಅರಣ್ಯ ಇಲಾಖೆ ಹಳ್ಳಿಗಳಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆಯೇ? ಶಾಲಾ ಕಾಲೇಜುಗಳಲ್ಲಿ ಅರಿವು ತುಂಬುವ ಕಾರ್ಯಕ್ರಮ ಹಮ್ಮಿಕೊಂಡಿದೆಯೇ? ಕಾಟಿಗಳೊಂದಿಗೆ ಹೇಗೆ ವರ್ತಿಸಬೇಕೆಂಬ ನಾಮಫಲಕ, ಜಾಹಿರಾತು ಎಲ್ಲಾದರೂ ಹಾಕಿದೆಯೇ? ಸಂಘರ್ಷ ಇರುವ ಸ್ಥಳಗಳಲ್ಲಿ ಸಹಜೀವನದ ಕುರಿತು ತರಬೇತಿ ನೀಡಿದೆಯೇ? ಕಾಟಿಗಳ ಆವಾಸ ಸ್ಥಾನ ರಕ್ಷಣೆಗೆ ಪರಿಣಾಮಕಾರಿ ಕ್ರಮ ಕೈಗೊಂಡಿದೆಯೇ? ಅವುಗಳಿಗೆ ನೀರು, ಆಹಾರ ಲಭ್ಯತೆ ಬಗೆಗೆ ತಲೆ ಕೆಡಿಸಿಕೊಂಡಿದೆಯೇ? ಅವುಗಳ ಕಾರಿಡಾರ್ ರಕ್ಷಣೆಗೆ ಕ್ರಮ ಕೈಗೊಂಡಿದೆಯೇ? ಕಾಟಿಗಳೊಂದಿಗಿನ ರೈತರ ಸಹಜೀವನವನ್ನು ಉತ್ತೇಜಿಸಿದೆಯೇ? ಕಾಟಿಗಳ ಬಗೆಗೆ ವೈಜ್ಞಾನಿಕ ಅಧ್ಯಯನ ಮಾಡಿದೆಯೇ? ಕಾಟಿಗಳ ಗಣತಿ ಮಾಡಿದೆಯೇ? ಇವುಗಳಿಗೆಲ್ಲಾ ಉತ್ತರ ಬಹುತೇಕ “ಇಲ್ಲ” ಎಂದಿದೆ. ಅಧಿಕಾರಿಗಳು ಮಾಡಬೇಕಾದ ಮೂಲಭೂತ ಕೆಲಸಗಳನ್ನೇ ಮಾಡಿಲ್ಲ. ಈಗ ಅವುಗಳನ್ನು ಹಿಡಿದು ಸ್ಥಳಾಂತರ ಮಾಡುವ ಅವಸರದ ನಿರ್ಧಾರ ಅವೈಜ್ಞಾನಿಕ ಅಲ್ಲವೇ?
ಕಾಟಿ ಬಿಡುಗಡೆ ಸ್ಥಳದ ಬಗೆಗೆ ಮಾಹಿತಿಯ ಕೊರತೆ
ಒಂದು ಕಡೆ ಇರುವ ಜೀವಿಗಳನ್ನು, ಇನ್ನೊಂದು ಕಡೆ ತೆಗೆದುಕೊಂಡು ಹೋಗಿ ಬಿಟ್ಟು ಅಲ್ಲಿ ಸಮಸ್ಯೆ ಆದರೆ ಅದಕ್ಕೆ ಹೊಣೆಗಾರರು ಯಾರು? ರಕ್ಷಿತಾರಣ್ಯಗಳಿಗೆ ಸ್ಥಳಾಂತರ ಮಾಡುತ್ತಾರಾ ಎಂದು ನೋಡಿದರೆ, ಅವುಗಳ ಧಾರಣಾ ಸಾಮರ್ಥ್ಯ ಬಹುತೇಕ ಕಡಿಮೆ ಆಗಿದೆ. ಹೊಸ ಜೀವಿಗಳಿಗೆ ನೀರು, ಆಹಾರ ಅಲ್ಲಿ ಲಭ್ಯವಿಲ್ಲ. ಹೀಗಿರುವಾಗ ಕಾಟಿ ಹಿಡಿದು ಎಲ್ಲಿಗೆ ಬಿಡುವುದು?
ಚಿಕ್ಕಮಗಳೂರು ಜಿಲ್ಲೆಯ ಮೂರು ಅರಣ್ಯ ವಿಭಾಗಗಳಲ್ಲಿ ಒಟ್ಟು 9,807 ಅರಣ್ಯ ಒತ್ತುವರಿ ಪ್ರಕರಣಗಳನ್ನು ಅರಣ್ಯ ಇಲಾಖೆ ಗುರುತಿಸಿದೆ. ಅದರಿಂದ 36, 783 ಎಕರೆ ಅರಣ್ಯ ಪ್ರದೇಶ ಒತ್ತುವರಿ ಆಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತಿವೆ. ಈಗ ಕಾಟಿ ಸೆರೆ ಹಿಡಿಯಲು ಹೊರಟಿರುವ ಕೊಪ್ಪ ಅರಣ್ಯ ವಿಭಾಗದಲ್ಲೇ ಅತೀ ಹೆಚ್ಚು ಎಂದರೆ, 28,630 ಎಕರೆ ಅರಣ್ಯ ಒತ್ತುವರಿಯನ್ನು ಗುರುತಿಸಲಾಗಿದೆ. ಅಲ್ಲಿನ ಅರಣ್ಯ ಒತ್ತುವರಿಯನ್ನು ಮೊದಲು ತೆರವು ಗೊಳಿಸಬೇಕಾದುದು ಆದ್ಯತೆಯ ವಿಷಯ ಆಗಬೇಕಿತ್ತು ಅಲ್ಲವೇ? ವನ್ಯಜೀವಿಗಳ ಆವಾಸ ಸ್ಥಾನ ಉಳಿಸಬೇಕಾದುದು ಅತೀ ಅಗತ್ಯ ಕ್ರಮ ಅಲ್ಲವೇ? ವಾಸ್ತವವಾಗಿ, ಅರಣ್ಯ ಇಲಾಖೆ ಗುರುತಿಸಿರುವುದಕ್ಕಿಂತಲೂ ಎರಡೂ ಮೂರು ಪಟ್ಟು ಹೆಚ್ಚು ಒತ್ತುವರಿ ಪ್ರಕರಣಗಳಿವೆ. ಸರ್ಕಾರಿ ದಾಖಲೆಗಳಲ್ಲಿ ಅರಣ್ಯ ಉಳಿದಿದೆ. ಆ ಅರಣ್ಯಗಳು ಶ್ರೀಮಂತರ, ಪ್ರಭಾವಿಗಳ ಕಾಫಿ, ಟೀ ತೋಟಗಳಾಗಿ ಪರಿವರ್ತನೆ ಆಗಿದೆ. ಇದು ತಳಮಟ್ಟದ ವಾಸ್ತವ.
ಕಾಟಿ ಸೆರೆ ಕಾರ್ಯಾಚರಣೆ ಅರಣ್ಯ ಇಲಾಖೆಯ ಕೊನೆಯ ಆದ್ಯತೆ ಆಗಬೇಕಾಗಿತ್ತು. ಆದರೆ ಪ್ರಥಮ ಆದ್ಯತೆ ಆಗಿದೆ. ಇದು ಅತ್ಯಂತ ಖೇದಕರ. ನಾನು ಅರಣ್ಯ ಸಚಿವರಾದ ಈಶ್ವರ್ ಬಿ ಖಂಡ್ರೆಯವರ ನಾಯಕತ್ವದಲ್ಲಿ ಅಪಾರ ನಂಬಿಕೆ ಇಟ್ಟಿದ್ದು, ಈ ಕೂಡಲೇ ಅವೈಜ್ಞಾನಿಕ ಕಾಟಿ ಸೆರೆ ಕಾರ್ಯಾಚರಣೆ ನಿಲ್ಲಿಸುವಂತೆ ಈ ಮೂಲಕ ವಿನಂತಿಸುತ್ತೇನೆ. ಜೊತೆಗೆ ಕಾಟಿ ಸೇರಿದಂತೆ ವನ್ಯಜೀವಿಗಳ ದಾಳಿಯಿಂದ ಆಗುವ ಬೆಳೆಹಾನಿಗೆ ಗರಿಷ್ಠ ಮಟ್ಟದ ಪರಿಹಾರವನ್ನು ರೈತರಿಗೆ ನೀಡುವ ಕೆಲಸ ಅತೀ ಅಗತ್ಯವಾಗಿ ಆಗಬೇಕಾಗಿದೆ ಎಂದರು.
