Thursday, July 16, 2026
Homeಜಿಲ್ಲಾಸುದ್ದಿಸಿ.ಟಿ. ರವಿ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ : ಎಂ.ಆರ್. ದೇವರಾಜ್ ಶೆಟ್ಟಿ ಆರೋಪ

ಸಿ.ಟಿ. ರವಿ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ : ಎಂ.ಆರ್. ದೇವರಾಜ್ ಶೆಟ್ಟಿ ಆರೋಪ

Telegram Group
Join Now

ಚಿಕ್ಕಮಗಳೂರು: ರಸ್ತೆ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಶಾಸಕರು ನೀಡಿದ್ದ ಪ್ರಚೋದನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ರಾಂಪುರ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ನಮ್ಮ ಪಕ್ಷದ ಮುಖಂಡರು ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ ಆರೋಪಿಸಿದರು.

ಶಾಸಕ ಎಚ್.ಡಿ. ತಮ್ಮಯ್ಯ ಅವರು ರಸ್ತೆ ಕಾಮಗಾರಿ ಪರಿಶೀಲಿಸುವ ಸಂದರ್ಭದಲ್ಲಿ ಎಂಜಿನಿಯರ್ಗಳಿಗೆ ಅವ್ಯಾಚ ಶಬ್ದಗಳಿಂದ ಬೈದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಬೆಂಕಿ ಹಾಕಿ ಸುಟ್ಟು ಬಿಡುತ್ತೇನೆ’ ಎಂದು ತೀವ್ರ ವಾಗ್ದಾಳಿ ನಡೆಸಿದ್ದರು. ಅದನ್ನು ಗಮನಿಸಿದ್ದ ನಮ್ಮ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆ ಸಂದರ್ಭದಲ್ಲಿ ಗವನಹಳ್ಳಿ ವಾರ್ಡಿನ ನಗರಸಭೆ ಸದಸ್ಯ ಪರಮೇಶ್ವರ ರಾಜ ಅರಸ್ ಮತ್ತು ಅವರ ತಂಡದವರು ಎದುರಾಗಿ ‘ಗೋ ಬ್ಯಾಕ್ ರವಿ’ ಎಂದು ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ. ಅದಕ್ಕೆ ಕಾರಣ ಶಾಸಕರ ಪ್ರಚೋದನಕಾರಿ ಹೇಳಿಕೆ ಮತ್ತು ನಮ್ಮ ಸರ್ಕಾರ ಇದೆ ಎಂಬ ದುರಾಂಕರ. ಈ ಘಟನೆ ನಡೆಯದಿದ್ದರೆ ನಮ್ಮ ಶಾಸಕರು ಕಾಮಗಾರಿ ವೀಕ್ಷಣೆ ಮಾಡಿ ವಾಪಾಸಾಗುತ್ತಿದ್ದರು ಎಂದು ಹೇಳಿದರು.

ಕಾಲು ನಡಿಗೆಯಲ್ಲಿ ಆದಿಶಕ್ತಿ ನಗರದ ಸರ್ಕಲ್ವರೆಗೆ ಸಾಗಿ ರಸ್ತೆಯ ಕಾಮಗಾರಿಗೆ ಅನುಕೂಲವಾಗುವಂತೆ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸದಿರುವುದನ್ನು ಗಮನಿಸಿ, ಸಂಬಂಧಪಟ್ಟ ಎಂಜಿನಿಯರ್ ಜೊತೆ ಮಾತುಕತೆ ನಡೆಸಿದರು. ಆನಂತರ ವಾಹನದಲ್ಲಿ ವಾಪಸ್ ತೆರಳುವಾಗ ಕಾಂಗ್ರೆಸ್ ಕಾರ್ಯಕರ್ತರು ಸಿ.ಟಿ ರವಿ ಅವರನ್ನು ಅಡ್ಡಗಟ್ಟಿ ಘೋಷಣೆಗಳನ್ನು ಕೂಗಿದರು ಎಂದು ಆರೋಪಿಸಿದರು.

ಅದೇ ಸಂದರ್ಭದಲ್ಲಿ ಕುರುವಂಗಿಯ ರಾಜೇಶ್ ಎಂಬುವವರನ್ನು ಮುಂದಿಟ್ಟುಕೊಂಡು ನಮ್ಮ ಪಕ್ಷದ ಸಂತೋಷ್ ಕೋಟ್ಯನ್ ಎದೆ ಹಿಡಿದು ಹಲ್ಲೆಗೆ ಮುಂದಾಗಿದ್ದು ಅವರುಗಳೆ. ಆದರೆ, ಹಲ್ಲೆ ನಡೆಸಿದ್ದ ರಾಜೇಶ್ ಅವರಿಂದಲೇ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಸಿರುವುದನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯ ತೆಗೆದುಕೊಳ್ಳುವ ಯಾವುದೇ ತೀರ್ಮಾನ ಮತ್ತು ಆದೇಶವನ್ನು ಜಿಲ್ಲಾ ಬಿಜೆಪಿ ಸ್ವಾಗತಿಸುತ್ತದೆ. ನಮ್ಮ ಪಕ್ಷದ ಅಭ್ಯರ್ಥಿ ಡಿ.ಎನ್.ಜೀವರಾಜ್ ಪರವಾಗಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದರು.

ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯ ಪ್ರಕೃತಿ ಪಬ್ಲಿಕ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದ ಎರಡು ದಿನಗಳ ಜಿಲ್ಲಾ ಮಟ್ಟದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸೋಮಶೇಖರ್, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಮಾಧ್ಯಮ ಪ್ರಮುಖ್ ದಿನೇಶ್, ಚಮಿನ್, ರಾಜು, ಸಚಿನ್, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments