Wednesday, May 27, 2026
Homeಜಿಲ್ಲಾಸುದ್ದಿಅರಣ್ಯದಂಚಿನಲ್ಲಿ ವಾಸಿಸುತ್ತಿರುವ 13 ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳ ಎ ಯಿಂದ ಡಿ ವೃಂದದ...

ಅರಣ್ಯದಂಚಿನಲ್ಲಿ ವಾಸಿಸುತ್ತಿರುವ 13 ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳ ಎ ಯಿಂದ ಡಿ ವೃಂದದ ಹುದ್ದೆಗಳಲ್ಲಿ ಅವಕಾಶ ಕಲ್ಪಿಸಿ : ಗೋಪಾಲ್

ಚಿಕ್ಕಮಗಳೂರು: 2025-26ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರ ಘೋಷಿಸಿರುವ ಅರಣ್ಯ, ಅರಣ್ಯದಂಚಿನಲ್ಲಿ ವಾಸ ಮಾಡುತ್ತಿರುವ ೧೩ ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳ ಎ ಯಿಂದ ಡಿ ವೃಂದದ ಹುದ್ದೆಗಳಲ್ಲಿ ಅವಕಾಶ ಕಲ್ಪಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆದಿವಾಸಿ ಹಸಲರು ಸಂಘದ ಜಿಲ್ಲಾಧ್ಯಕ್ಷ ಗೋಪಾಲ್ ಒತ್ತಾಯಿಸಿದರು.

ಅರಣ್ಯ, ಅರಣ್ಯದಂಚಿನಲ್ಲಿ ವಾಸಮಾಡುತ್ತಿರುವ ೧೩ ಬುಡಕಟ್ಟು ಜನಾಂಗಗಳಾದ ಕಾಡುಕುರುಬ/ಬೆಟ್ಟಕುರುಬ, ಜೇನುಕುರುಬ, ಇರುಳಿಗ, ಸೋಲಿಗ, ಕೊರಗ, ಹಸಲರು, ಗೌಡಲು, ಪಣಿಯನ್, ಯರವ, ಸಿದ್ಧಿ, ಕುಡಿಯ ಮತ್ತು ಮಲೆಕುಡಿಯ ಬುಡಕಟ್ಟುಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿಯನ್ನು ಮಾಡಲು ಮುಂದಾಗಿರುವುದು ಅತ್ಯಂತ ಅನಿವಾರ್ಯ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿದ್ದು, ಇಂದಿಗೂ ಅರಣ್ಯ, ಅರಣ್ಯದಂಚಿನಲ್ಲಿ ವಾಸಮಾಡುತ್ತಿರುವ ೧೩ ಬುಡಕಟ್ಟು ಜನಾಂಗಗಳು ಒಂದು ಸರ್ಕಾರಿ ಕೆಲಸವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಇಂತಹ ಮಹತ್ವದ ಕಾರ್ಯ ಕೈಗೊಂಡಿರುವುದು ದಿಕ್ಕು-ದೆಸೆ ಇಲ್ಲದೆ ಅಳಿವಿನಂಚಿನಲ್ಲಿರುವ ಆದಿವಾಸಿಗಳಿಗೆ ಮರು ಜೀವ ಬಂದಂತಾಗಿದೆ ಎಂದು ಹೇಳಿದರು.

ಈ ಕಾರ್ಯವು ಕೇವಲ ಸಿ ಮತ್ತು ಡಿ ವೃಂದಗಳಿಗೆ ಮಾತ್ರ ನೇರ ನೇಮಕಾತಿ ಮಾಡಲು ಮುಂದಾಗಿರುವುದು ಬೇಸರ ಸಂಗತಿ, ವಿದ್ಯುತ್ ದೀಪಗಳಿಲ್ಲದೆ ಬದುಕುತ್ತಿರುವ ಆದಿವಾಸಿಗಳು ವಾಸಿಸಲು ಮನೆಗಳಿಲ್ಲದೆ ಹುಲ್ಲಿನ ಜೋಪಡಿಗಳನ್ನು ಹಾಕಿಕೊಂಡು, ಹಳ್ಳ ಕೊಳ್ಳದ ನೀರುಗಳನ್ನು ಕುಡಿದು ಬದುಕುತ್ತಿದ್ದಾರೆ ಎಂದು ಹೇಳಿದರು.

ನಮ್ಮ ವಾಸ ಸ್ಥಳಗಳಾದ ಹಾಡಿ, ಗದ್ದೆ, ಪೋಡು, ಕಾಲೋನಿ ಹಾಗೂ ದೊಡ್ಡಿಗಳಲ್ಲಿ ಸರ್ಕಾರದ ಮೂಲಭೂತ ದಾಖಲಾತಿಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋರ್ಟ್ ಕಾರ್ಡ್, ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಇಂದಿಗೂ ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯ ಆಗಿಲ್ಲ ಎಂದರು.

ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಬರುವ ಶೇ.೭ ಮೀಸಲಾತಿಯ ಬಹುಪಾಲು ಏಕ ಮುಖವಾಗಿ ಸಾಗುತ್ತಾ, ಸರ್ಕಾರದ ಎಲ್ಲಾ ಹಂತದಲ್ಲಿಯೂ ಈ ಬಹುಸಂಖ್ಯಾತ ಪ್ರಬಲ ಸಮುದಾಯವೇ ದಕ್ಕಿಸಿಕೊಂಡು, ಮೂಲ ಆದಿವಾಸಿ ಬುಡಕಟ್ಟುಗಳಿಗೆ ಪಾರಂಪರಿಕ ಅನ್ಯಾಯವಾಗಿದೆ ಎಂದು ಹೇಳಿದರು.

ಇದರಿಂದಾಗಿ ಆದಿವಾಸಿಗಳು ಇದುವರೆಗೂ ಸರ್ಕಾರದ ?ಎ? ಮತ್ತು ?ಬಿ? ಶ್ರೇಣಿಯ ಹುದ್ದೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ, ಅರಣ್ಯ ಮತ್ತು ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಮೂಲ ಆದಿವಾಸಿಗಳಲ್ಲಿ ಪಿ.ಎಚ್.ಡಿ, ಎಂ.ಎ, ಎಂ.ಕಾಂ, ಎಂ.ಎಸ್.ಡಬ್ಲ್ಯೂ, ಪ್ರೊಫೆಷನಲ್ ಕೋರ್ಸ್ ಶಿಕ್ಷಣ ಪಡೆದಿದ್ದರೂ ವಿದ್ಯಾರ್ಹತೆಗೆ ತಕ್ಕಂತಹ ಉದ್ಯೋಗವಿಲ್ಲದೆ, ನಿರುದ್ಯೋಗಿಗಳಾಗಿ ಇತ್ತ ಹಾಡಿಗಳಿಗೂ ಹೋಗಲಾರದೆ, ನಗರಗಳಲ್ಲಿಯೂ ವಾಸಿಸಲು ಆಗದೇ ಸಂಕಷ್ಟದಲ್ಲಿದ್ದಾರೆ ಎಂದರು.

ಇದರಿಂದ ನಮ್ಮ ಸಮುದಾಯಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಸಿವಿಲ್ ಸೇವೆಗಳಿಗೆ ವಿಶೇಷ ನೇರ ನೇಮಕಾತಿ ಮಾಡಲು ೨೦೨೫-೨೬ನೇ ಸಾಲಿನ ಆಯವ್ಯಯದ ಕಂಡಿಕೆ ೧೯೯ರಲ್ಲಿ ಸರ್ಕಾರವು ಘೋಷಿಸಿರುವಂತೆ ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಮಾಡುತ್ತಿರುವ ೧೩ ಬುಡಕಟ್ಟು ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಸಂದರ್ಭದಲ್ಲಿ ಎ ಯಿಂದ ಡಿ ವೃಂದದಲ್ಲೂ ಅವಕಾಶ ಕಲ್ಪಿಸಿಕೊಟ್ಟು ಆದಿವಾಸಿಗಳ ಅಭಿವೃದ್ಧಿಗೆ ಸಹಾಯ ಮಾಡಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆದಿವಾಸಿ ಹಸಲರು ಸಂಘದ ಜಿಲ್ಲಾ ಕಾರ್ಯದರ್ಶಿ ಆನಂದ್, ಸದಸ್ಯರಾದ ರಮೇಶ್, ರಮೇಶ್ ಯಾದವ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!