ಬೆಂಗಳೂರು: ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಬೆಂಗಳೂರು ನಗರದ ವಿವಿಧ ಪ್ರದೇಶಗಳ ಸುಮಾರು 20,000ಕ್ಕೂ ಅಧಿಕ ದುರ್ಗಾ ದೇವಿ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮದ ನಿಮಿತ್ತ ಅಕ್ಟೋಬರ್ 20 ಮತ್ತು 21ರಂದು ವಾಹನಗಳ ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಿರೋದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳಿಗ್ಗೆ 11 ಗಂಟೆಯಿಂದ ಮರುದಿನ ಬೆಳಗಿನ ಜಾವ 6 ಗಂಟೆಯವರೆಗೆ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಕೆನ್ಸಿಂಗ್ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಯಿಂದ ಎಂ.ಇ.ಜಿ ಮೂಲಕ-ಹಲಸೂರು ಲೇಕ್ ಕಡೆಗೆ ಕೆನ್ಸಿಂಗ್ಟನ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಕೇವಲ ಎಂಇ.ಜಿ ಕಡೆಯಿಂದ ಕೆನ್ಸಿಂಗ್ಟನ್-ಮರ್ಫೀ ರಸ್ತೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ.
ತಿರುವಳ್ಳವರ್ ಪ್ರತಿಮೆ ಜಂಕ್ಷನ್-ಅಣ್ಣಸ್ವಾಮಿ ಮೊದಾಲಿಯರ್ ರಸ್ತೆ ಕಡೆಯಿಂದ ಆರ್.ಬಿ.ಐ ಜಂಕ್ಷನ್ ಮುಖಾಂತರ ಹಲಸೂರು ಲೇಕ್ ಕಡೆಗೆ ಅಣ್ಣಸ್ವಾಮಿ ಮೊದಾಲಿಯರ್ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ. ಕೇವಲ ಹಲಸೂರು ಲೇಕ್ ಕಡೆಯಿಂದ ತಿರುವಳ್ಳವರ್ ಪ್ರತಿಮೆ ಜಂಕ್ಷನ್ ಕಡೆಗೆ ಏಕಮುಖ ಸಂಚಾರಕ್ಕೆ ಅವಕಾಶವಿರಲಿದೆ.
