Wednesday, May 27, 2026
Homeಕ್ರೈಮ್ಅನಾರೋಗ್ಯಕ್ಕೆ ಔಷಧಿ ನೀಡುವ ನೆಪದಲ್ಲಿ ವಂಚನೆ: ಏಳು ಮಂದಿ ವಶಕ್ಕೆ

ಅನಾರೋಗ್ಯಕ್ಕೆ ಔಷಧಿ ನೀಡುವ ನೆಪದಲ್ಲಿ ವಂಚನೆ: ಏಳು ಮಂದಿ ವಶಕ್ಕೆ

ಬಾಳೆಹೊನ್ನೂರು : ಗ್ರಾಮೀಣ ಭಾಗದ ಮನೆಗಳಿಗೆ ತೆರಳಿ ಅನಾರೋಗ್ಯ ಪೀಡಿತರಿಗೆ ಔಷಧಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಒದಗಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದ ಏಳು ಮಂದಿಯನ್ನು ಬಾಳೆಹೊನ್ನೂರು ಪೊಲೀಸರು ವಶಕ್ಕೆ ಪಡೆದು, ವಂಚನೆಗೊಳಗಾದವರಿಗೆ ಹಣವನ್ನು ವಾಪಾಸ್ಸು ಕೊಡಿಸಿದ್ದಾರೆ.

ಕೊಪ್ಪ ತಾಲ್ಲೂಕಿನ ಹೇರೂರು ಗ್ರಾಪಂ ಸಮೀಪದ ವೀರಗಲ್ಲುಮಕ್ಕಿ, ಹಿರೇಗದ್ದೆ ಗ್ರಾಪಂ ವ್ಯಾಪ್ತಿ ಸೇರಿದ ಒಟ್ಟು ನಾಲ್ಕು ಕಡೆಗಳಲ್ಲಿ ಅನಾರೋಗ್ಯಕ್ಕೆ ಒಳಗಾದ ಮನೆಗಳಿಗೆ ತೆರಳಿ ಅತೀ ಶೀಘ್ರವಾಗಿ ಗುಣಮುಖರಾಗುವ ಔಷಧಿಗಳನ್ನು ಕೊಡುವುದಾಗಿ ಹಾಗೂ ಸರ್ಕಾರದಿಂದ ಅನಾರೋಗ್ಯ ಪೀಡಿತರಿಗೆ ವಿವಿಧ ಸವಲತ್ತುಗಳನ್ನು ಕೊಡಿಸುವುದಾಗಿ ಸಾವಿರಾರು ರೂಪಾಯಿ ಹಣವನ್ನು ಪಡೆದುಕೊಂಡು ಸಂಪರ್ಕಕ್ಕಾಗಿ ಮೊಬೈಲ್ ನಂಬರ್ ನೀಡಿ ಕಳುಹಿಸಿದ್ದರು.

ಹಣ ಪಡೆದುಕೊಂಡ ಕೆಲ ದಿನಗಳ ಬಳಿಕ ವಂಚಕರು ಮೊಬೈಲ್ ಪೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಈ ವ್ಯಾಪ್ತಿಯಿಂದ ಪರಾರಿಯಾಗಿದ್ದರು. ಈ ಕುರಿತು ವಂಚನೆಗೆ ಒಳಗಾದ ವ್ಯಕ್ತಿಗಳು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಶಿವಮೊಗ್ಗ ಸಮೀಪದ ಹೆಂಚಿನ ಸಿದ್ದಾಪುರ ಎಂಬ ಗ್ರಾಮದ ಏಳು ಜನರನ್ನು ಪತ್ತೆಹಚ್ಚಿ ಬಾಳೆಹೊನ್ನೂರಿಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದಂತೆ ವಂಚಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಹಣ ಪಡೆದುಕೊಂಡವರಿಗೆ ಹಣವನ್ನು ವಾಪಾಸ್ಸು ನೀಡುವುದಾಗಿ ತಿಳಿಸಿದ್ದಾರೆ. ಬಳಿಕ ಹಣ ಕಳೆದುಕೊಂಡವರಿಗೆ ಪೊಲೀಸರ ಸಮ್ಮುಖದಲ್ಲಿ ವಂಚಕರು ಹಣ ನೀಡಿ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ.

ಇಂತಹ ವಂಚನೆ ಪ್ರಕರಣಗಳು ಮರುಕಳಿಸಿದಲ್ಲಿ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿರುವ ಪೊಲೀಸರು, ಯಾವುದೇ ಸಮಯದಲ್ಲಿ ಠಾಣೆಗೆ ಕರೆದರೂ ಹಾಜರಾಗಿ ವಿಚಾರಣೆಗೆ ಒಳಗಾಗಬೇಕು ಎಂದು ಸೂಚಿಸಿ ಆರೋಪಿಗಳಿಂದ ಹೇಳಿಕೆ ಪಡೆದು ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!